Sunday, 12 October 2014

ಮನಸ್ಸಿನ ನಿಯಂತ್ರಣದಿಂದ ಆಗುವ ಪ್ರಯೋಜನ ಏನು?

ಈ ಮನಸ್ಸು ಮಂಗನಂತೆ ಚಂಚಲ, ಆನೆಯಂತೆ ಬಲಿಷ್ಠ. ಪ್ರತಿಯೊಂದು ಪ್ರಾಣಿಗೂ, ವಸ್ತುವಿಗೂ ಅದರದೇ ಆದ ಸ್ವಭಾವವಿರುವಂತೆ, ಮನಸ್ಸಿಗೆ ಹುಚ್ಚೆದ್ದು ಕುಣಿಯುವ ಸ್ವಭಾವವಿದೆ.
ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ, ಅದರ ಮೂಲಕ ಮಹತ್ಕಾರ್ಯಗಳನ್ನು ಸಾಧಿಸಬಹುದು. ನಮ್ಮ ವಶದಲ್ಲಿ ಇಲ್ಲದಿದ್ದರೆ ಸಾಮಾನ್ಯ ಕಾರ್ಯವನ್ನು ಮಾಡಿಸಲು ಸಾಧ್ಯವಿಲ್ಲ. ನಮ್ಮ ಮನಸ್ಸಿಗೆ ಪ್ರಚಂಡ ಶಕ್ತಿ ಇದೆ. ಆದರೆ ಈ ಶಕ್ತಿ ನಾನಾ ರೀತಿಗಳಿಂದ ಹರಿದು ಹಂಚಿ ಹೋಗಿದೆ. ಉದಾಹರಣೆಗೆ ಸೂರ್ಯನ ಕಿರಣಗಳು ಹರಡಿಕೊಂಡಾಗ, ಅವುಗಳಿಗೆ ಶಾಖ ಮಾತ್ರ ಇರುತ್ತದೆ. ಆದರೆ ಅದೇ ಕಿರಣಗಳನ್ನು ಭೂತಗನ್ನಡಿಯ ಮೂಲಕ ಹಾಯಿಸಿ, ಕಾಗದದ ಮೇಲೆ ಬಿಟ್ಟಾಗ ಬೆಂಕಿ ಹೊತ್ತಿಕೊಳ್ಳುವುದು ಕಾಣುತ್ತದೆ. ಸೂರ್ಯನ ಕಿರಣಗಳು ಒಂದೇ ಕಡೆ ಸೇರಿದ್ದರಿಂದ ಬೆಂಕಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಹರಡಿಕೊಂಡಿರುವ ಮನಶಕ್ತಿಯನ್ನು ಒಗ್ಗೂಡಿಸಬೇಕಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ಏಕಾಗ್ರಗೊಂಡ ಮನಸ್ಸು ಒಂದು ಸರ್ಚ್ ಲೈಟ್ ಇದ್ದ ಹಾಗೆ. ಸರ್ಚ್ ಲೈಟು ದೂರದ ಮೂಲೆಯಲ್ಲಿರುವ ವಸ್ತುವನ್ನು ಕಣ್ಣಿಗೆ ಕಾಣಿಸುವಂತೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮಗೆ ಅಗತ್ಯವಾದ ವಿಷಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಿದರೆ, ತಮ್ಮ ತಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತಾರೆ. ನಾನಾ ವಿಷಯಗಳ ಕಡೆಗೆ ಹರಿಯುತ್ತಿರುವ ಮನಸ್ಸಿನ ಶಕ್ತಿಯನ್ನು ಒಂದೇ ವಿಷಯದ ಕಡೆಗೆ ಹರಿಯುವಂತೆ ಮಾಡುವುದಕ್ಕೆ "ಏಕಾಗ್ರತೆ" (ಏಕ = ಒಂದು, ಅಗ್ರ = ತುದಿ) ಎನ್ನಬಹುದು.

Wednesday, 24 September 2014

ಬಾಂಧವ್ಯ ಮಾತ್ರ ಸಿಹಿ ಸಿಹಿ

ಸುಮಾರು ಎರಡು ವರ್ಷಗಳ ಹಿಂದೆ, ಹೀಗೆ ಸಮಯ ಕಳೆಯಲು ಸಾಮಾಜಿಕ ಜಾಲತಾಣ ಫೇಸ್ಬುಕ್ ನ ಒಂದು ಗ್ರೂಪ್ ನಲ್ಲಿ ಕಾಮೆಂಟ್ ಮಾಡುತ್ತಿದ್ದೆ. ಆಗ ಒಬ್ಬ ವ್ಯಕ್ತಿ ಅಲ್ಲಿ ಒಂದು ಪೋಸ್ಟ್ ಹಾಕಿ ತುಂಬಾ ಜನರ ವಿರೋಧ ಎದುರಿಸುತ್ತಿದ್ದ. ಪೋಸ್ಟ್ ಕೂಡ ವಿವಾದಾತ್ಮಕವಾಗಿತ್ತು. ಆದರೆ ಆತ ಅಲ್ಲಿ ಯಾರಿಗೂ ನೋವಾಗುವ ರೀತಿಯಲ್ಲಿ ಕಾಮೆಂಟ್ ಮಾಡಿರಲಿಲ್ಲ. ಎಲ್ಲರು ಆತನಿಗೆ ಬೈದು ಕಾಮೆಂಟ್ ಮಾಡುತ್ತಿದ್ದರು. ಆತ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದ್ದ (ವಾದ ಮಾಡುತ್ತಿದ್ದ). ಗುಂಪಿಗೆ ಹೊಸ ಸದಸ್ಯನಾದ ಕಾರಣ ಅಲ್ಲಿನ active ಸದಸ್ಯರು ಯಾರೂ ಅವನಿಗೆ ಪರಿಚಯ ಇರಲಿಲ್ಲ. ನನಗೆ ಆತ ಯಾರು ಅಂತ ಗೊತ್ತಿರಲಿಲ್ಲ. ಹೋಗಲಿ ಯಾರೋ ಹೊಸಬ ಇರಬೇಕು ಎಂದು ಸುಮ್ಮನೆ ಕಾಮೆಂಟ್ ಮಾಡಲು ಹೋಗಲಿಲ್ಲ. ಮರುದಿನ ಪುನಃ ಫೇಸ್ಬುಕ್ ಓಪನ್ ಮಾಡಿದಾಗ ಆ ಪೋಸ್ಟ್ ನಲ್ಲಿ ಮತ್ತಷ್ಟು ಕಾಮೆಂಟ್ ಗಳು. ೫-೬ ಸದಸ್ಯರು ಆ ವ್ಯಕ್ತಿಗೆ ಹಿಗ್ಗಾಮುಗ್ಗಾ ಬೈದಿದ್ದರು. ಆತ ಬೇಸರಗೊಂಡು ಗುಂಪನ್ನು ಬಿಟ್ಟು ಹೋಗಿದ್ದ. ಆ ವ್ಯಕ್ತಿಯು ನನ್ನ inbox ಗೆ ಮೆಸೇಜ್ ಮಾಡಿದ್ದ. "ನಾವು ಉತ್ತಮ ಗೆಳೆಯರಾಗಿ ಇರೋಣ. ಈ ಗುಂಪಿನ ಸಹವಾಸ ಸಾಕು ನನಗೆ. ನಾನು ಗುಂಪನ್ನು ಬಿಡುತ್ತಿದ್ದೇನೆ. ಬಾಂಧವ್ಯ ಮಾತ್ರ ಸಿಹಿ ಸಿಹಿ ಗೆಳೆಯ" ಎಂದು.
ಆಗ ಅವನು ಯಾರು, ಏನು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಒಂದೇ ಮೆಸೇಜ್ ಮಾಡಿ "ನೋಡಿ ಸರ್. ಫೇಸ್ಬುಕ್ ನಲ್ಲಿ ಇದೆಲ್ಲಾ ಸಾಮಾನ್ಯ. ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಹಿಡಿಸದೇ ಇರಬಹುದು. ನೀವು ಅಷ್ಟಕ್ಕೇ ಬೇಜಾರಾಗಿ ಗುಂಪು ಬಿಡಬೇಡಿ. ದಯವಿಟ್ಟು ಪುನಃ ಬನ್ನಿ" ಎಂದಿದ್ದೆ.
ಅದಕ್ಕೆ ಅವರು "ನಾನು ತೀಕ್ಷ್ಣವಾದಿ. ಗುಂಪಿಗೆ ನಾನು ಮತ್ತೆ ಬರುವುದಿಲ್ಲ. ಆದರೆ ನಮ್ಮ ಸ್ನೇಹ ಹೀಗೆ ಮುಂದುವರೆಯಲಿ. ನನ್ನ ಫೋನ್ ನಂಬರ್ ತಗೋ ಗೆಳೆಯ" ಎಂದರು.
ಆಯಿತು ಬಿಡಿ. ಅಲ್ಲಿಗೆ ಕಥೆ ಮುಗಿಯಿತು ಎಂದುಕೊಂಡು ನಾನು ಅಲ್ಲಿಗೆ ಆ ವಿಷಯ ಬಿಟ್ಟೆ.
ಅದಾಗಿ ಎರಡು ವಾರಗಳ ಬಳಿಕ ಮತ್ತೆ ನನಗೆ ಮೆಸೇಜ್ ಬಂತು "ದೋಸ್ತಾ, ನಾನು ನಿನ್ನನ್ನು ಭೇಟಿ ಆಗಬೇಕು. ನಮ್ಮ ಮನೆಗೆ ಬರಬಹುದಾ?" ಎಂದು. ಮನೆ ವಿಳಾಸವನ್ನು ಕಳಿಸಿದ್ದರು ಅವರು. ಒಂದು ದಿನ ಫೋನ್ ಮಾಡಿಕೊಂಡು ಅವರ ಮನೆಗೆ ಹೋದೆ. ಆ ವ್ಯಕ್ತಿಯನ್ನು ಮಾತನಾಡಿಸುವಾಗ ನನ್ನ ಗಂಟಲು ಕಟ್ಟಿ ಬಂದು ಕಣ್ಣುಗಳು ಮಂಜಾದವು. ಆದರೂ ಹೇಗೋ ಸುಧಾರಿಸಿಕೊಂಡೆ. ಆತ ಸಾಹಿತ್ಯ ಲೋಕದಲ್ಲಿ ಕಳೆದ ೧೫ ವರ್ಷಗಳಿಂದ ಸಾಕಷ್ಟು ಸಾಧನೆ ಮಾಡಿದ್ದ. ತುಂಬಾ ಹೆಸರು ಗಳಿಸಿದ್ದ. ನನಗೆ ಇವೆಲ್ಲಾ ತಿಳಿದಿದ್ದು ಆತನ ಭೇಟಿಯಾದ ಬಳಿಕ. ಆ ವ್ಯಕ್ತಿಯು osteogenesis imperfecta ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಹಾಸಿಗೆಯ ಮೇಲೆಯೇ ಇಡೀ ಜೀವನವನ್ನು ಮಹಾಯಾತನೆಯಲ್ಲಿ ಕಳೆದಿದ್ದ. ಹೊರ ಜಗತ್ತಿನ ಸಂಪರ್ಕವೇ ತಪ್ಪಿಹೋದರೂ ಅವರ ಕಲ್ಪನಾಶಕ್ತಿಯನ್ನು ಕಂಡು ಬೆರಗಾದೆ.
ಅವರು ಹಲವಾರು ಕವನಗಳನ್ನು ಬರೆದಿದ್ದರು. ಅವರು ಬರೆದ ಒಂದು ಪುಸ್ತಕವನ್ನೂ ನನಗೆ ನೀಡಿದರು. ಅಂದಿನಿಂದ ಶುರುವಾದ ಗೆಳೆತನ ಎರಡು ವರ್ಷಗಳ ಬಳಿಕ ಮತ್ತಷ್ಟು ಗಟ್ಟಿಯಾಗಿದೆ. ಫೇಸ್ಬುಕ್ ನಿಂದ ಪರಿಚಯವಾದ ವ್ಯಕ್ತಿ ನನಗೆ ಸ್ವಂತ ಅಣ್ಣನ ಹಾಗೆ ಆಗಿಬಿಟ್ಟ. ಪ್ರತಿ ಸಲ ಊರಿಗೆ ಹೋದಾಗ ಒಮ್ಮೆಯಾದರೂ ಅವರ ಮನೆಗೆ ಹೋಗಿ ಮಾತನಾಡಿಸಿ ಬರುತ್ತೇನೆ. ಅವರಿಗೂ ಖುಷಿ. ನನಗೂ ಖುಷಿ. ಅವರಿಂದ ಜೀವನದಲ್ಲಿ ಸಾಕಷ್ಟು ಕಲಿತಿದ್ದೇನೆ. ಕಲಿಯುತ್ತಲೂ ಇದ್ದೇನೆ. ಕೆಲವೊಮ್ಮೆ ಫೇಸ್ಬುಕ್ ನಿಂದ ಸಜ್ಜನರ ಪರಿಚಯವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ನಮ್ಮ ನಡುವಿನ ಬಾಂಧವ್ಯ ಮಾತ್ರ ಯಾವಾಗಲೂ ಸಿಹಿ ಸಿಹಿ.

Friday, 19 September 2014

ಮೊದಲ ಬಾರಿ ಹಾಸ್ಟೆಲ್ ಸೇರಿದಾಗ

ಯಾವತ್ತೂ ತಂದೆ ತಾಯಿಯನ್ನು ಬಿಟ್ಟು ಇರದಿದ್ದ ನನಗೆ ದ್ವಿತೀಯ ಪಿ.ಯು.ಸಿ. ಮುಗಿದ ಬಳಿಕ ಇಂಜಿನಿಯರಿಂಗ್ ಮಾಡಲು ಮನೆ ಬಿಟ್ಟು ಧಾರವಾಡಕ್ಕೆ ಹೋಗಬೇಕಾಯಿತು. ಮನಸ್ಸು ಒಪ್ಪದಿದ್ದರೂ ಶಿರಸಿಯಲ್ಲಿ ಇಂಜಿನಿಯರಿಂಗ್ ಕಾಲೇಜ್ ಇಲ್ಲವಲ್ಲ, ಹೋಗಲೇಬೇಕು ಎಂದು ಹೊರಟೆ. ಎಸ್.ಡಿ.ಎಂ. ಕಾಲೇಜ್ ನ ಕ್ಯಾಂಪಸ್ ಅದ್ಭುತವಾಗಿತ್ತು. ಆದರೆ ಬಯಲು ಸೀಮೆಯ ಹವಾಮಾನಕ್ಕೆ ನಾನು ಹೊಂದುಕೊಂಡು ಹೋಗಬಹುದೇ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತಿತ್ತು. ಎರಡು ತಿಂದರೆ ಹೆಚ್ಚು ಒಂದು ತಿಂದರೆ ಕಮ್ಮಿ. ಆ ರೀತಿ ಇತ್ತು ನನ್ನ ಆರೋಗ್ಯ. ಅಂತು ಕಾಲೇಜ್ ಎಡ್ಮಿಶನ್ ಮುಗಿಯಿತು. ಕಾಲೇಜ್ ಹಾಸ್ಟೆಲ್ ನಲ್ಲೇ ಇರುವುದು ಎಂದು ಕೂಡ ನಿರ್ಣಯ ತೆಗೆದುಕೊಳ್ಳಲಾಯಿತು. ಹಾಸ್ಟೆಲ್ ಗೆ ಎಡ್ಮಿಶನ್ ಮಾಡಿಸಲು ಹೊರಟೆವು. ವಿಜಯ್ ರಾವ್ ಎಂಬ ವ್ಯಕ್ತಿಯ ಪರಿಚಯವಾಯಿತು. ಅವರು ಕಾಲೇಜ್ ನಲ್ಲಿ ಅಕೌಂಟ್ಸ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ನೆಂಟರು ವಿಜಯಾ ಬ್ಯಾಂಕ್ ನಲ್ಲಿ ಇದ್ದರು. ನನ್ನ ತಂದೆ ಕೂಡ ವಿಜಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ತಂದೆಗೂ ಅವರು ಪರಿಚಯವಿದ್ದರು. ಹಾಗಾಗಿ “ಸರ್, ನೀವು ಕಾಳಜಿ ಮಾಡಬೇಡಿ. ನಾನು ಇದ್ದೇನೆ. ನಿಮ್ಮ ಮಗನಿಗೆ ಬೇಕಾದ ರೂಂ ಮೇಟ್ ಕೊಡಿಸುತ್ತೇನೆ. ಆದಷ್ಟು ನಿಮ್ಮ ಊರಿನವರು ಅಥವಾ ಹವ್ಯಕರು ಆಗಲಿ” ಎಂದರು. ವಿಜಯ್ ರಾವ್ ನಿಜಕ್ಕೂ ಒಬ್ಬ ನಿಗರ್ವಿ, ಸರಳ ವ್ಯಕ್ತಿತ್ವ ಹೊಂದಿದ್ದ ಮನುಷ್ಯ ಆಗಿದ್ದರು. ನಾನು ಸ್ವಲ್ಪ ನರ್ವಸ್ ಆಗಿದ್ದೆ. ವಿಜಯ್ ರಾವ್ ಅವರು ಮೂಲತಃ ಮಂಗಳೂರಿನವರು. ಆದರೆ ಅವರು ಧಾರವಾಡಕ್ಕೆ ಬಂದು ೨೫ ವರ್ಷವಾಗಿತ್ತು. ತುಳು ಮಾತನಾಡುತ್ತಿದ್ದರು ದಕ್ಷಿಣ ಕನ್ನಡದ ಸುಮಾರು ಶೆಟ್ಟಿ ಹುಡುಗರ ಜೊತೆ. ಕೆಲವು ಶೆಟ್ಟಿ ಸೀನಿಯರ್ಸ್ ಪರಿಚಯವಾದರು. “ಅವರ್ಯಾರೂ ಹಾಸ್ಟೆಲ್ ನಲ್ಲಿ ಇರುವುದಿಲ್ಲ. ಗಾಂಧಿನಗರದಲ್ಲಿ ಇರ್ತಾರೆ. ಏನಾದರು ತೊಂದರೆ ಆದರೆ, ಯಾರಾದರು ragging ಮಾಡಿದರೆ ಇವರಿಗೆ ತಿಳಿಸು. ಇವರು ನೋಡಿಕೊಳ್ಳುತ್ತಾರೆ” ಎಂದರು ವಿಜಯ್ ರಾವ್. ಅದರಲ್ಲಿ ಒಬ್ಬ ಆದಿತ್ಯ ಶೆಟ್ಟಿ, ಇನ್ನೊಬ್ಬ ಅವಿನಾಶ್ ಶೆಟ್ಟಿ. ಉದ್ದ ಕೂದಲು (ಆಗಿನ ಮಹೇಂದ್ರ ಸಿಂಗ್ ಧೋನಿ ತರಹ), ಕಿವಿಗೆ ಲೋಲಾಕ್, ಕೈಗೆ ಬಳೆ, ಕುತ್ತಿಗೆಗೆ ಚೈನ್, ಆ ಚೈನ್ ಗೆ ಜೋತಾಡುತ್ತಿದ್ದ ಬ್ಲೇಡ್, ಬೆಕ್ಕಿನ ಕಣ್ಣು, ಕೆನ್ನೆಯ ಮೇಲೆ ಏನೋ ಗಾಯದ ಕಲೆ. ನೋಡಲು ಖತರ್ನಾಕ್ ಇದ್ದ ಆತ. ಅವನ ಮೊಬೈಲ್ ನಂಬರ್ ಅನ್ನು ನನಗೆ ನೀಡಿದ. “ತಮಾ, ಅರ್ಜೆಂಟ್ ಇದ್ದರೆ message ಮಾಡು" ಎಂದ. ಅದಕ್ಕೆ ನಾನು “ನನ್ನ ಹತ್ತಿರ ಮೊಬೈಲ್ ಇಲ್ಲ ಅಣ್ಣ. ನಾನು ಕಾಯಿನ್ ಬಾಕ್ಸ್ ನಿಂದ ನಿಮಗೆ ಕಾಲ್ ಮಾಡ್ತೇನೆ " ಎಂದೆ. ಆಯಿತು ಎಂದು ಅವನು ಯಮಹಾ ಆರ್.ಎಕ್ಸ್ ಬೈಕ್ ಮೇಲೆ ಹೋದ. ನನಗೆ ಹಾಸ್ಟೆಲ್ ನಲ್ಲಿ ರೂಂ ನಂಬರ್ ೬೩೬ ಕೊಟ್ಟಿದ್ದರು. “ಅಲ್ಲಿ ಇನ್ನು ಇಬ್ಬರು ಬರಲಿದ್ದಾರೆ ನಿನ್ನ ರೂಂ ಗೆ. ಸಧ್ಯ ನೀನು ಒಬ್ಬನೇ ಇರಬಹುದು. ಕೆಳಗಿನ ವಿಂಗ್ ನಲ್ಲಿ ಫೈನಲ್ ಇಯರ್ ಸ್ಟೂಡೆಂಟ್ಸ್ ಇದ್ದಾರೆ. ಅವರಿಂದ ದೂರ ಇರು. ಅವರು ಜೂನಿಯರ್ಸ್ ಗೆ ತೊಂದರೆ ಕೊಡಬಹುದು. ರಾತ್ರಿ ೧೦:೩೦ರ ನಂತರ ರೂಂ ಹೊರಗೆ ಬರಬೇಡ” ಎಂದು ಹೇಳಿದರು ಹಾಸ್ಟೆಲ್ ಮ್ಯಾನೇಜರ್ ಜೋಶಿ ಸರ್. “ಹಾಸ್ಟೆಲ್ ವಾರ್ಡನ್ ನಾಳೆ ಬರುತ್ತಾರೆ. ಅವರನ್ನ ಭೇಟಿ ಆಗು. ಅವರ ಹೆಸರು ಎ.ವಿ.ಬಳ್ಳುಳಾಯ ಅಂತ. ಅವರು ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ನ ಪ್ರೊಫೆಸರ್” ಅಂತ ಹೇಳಿದರು ಜೋಶಿಯವರು. ಮರುದಿನ ನನ್ನ ರೂಂ ಗೆ ಒಬ್ಬ ಬಂದ. ಅವನು ಹೆದರುತ್ತ ಬಂದ. “ನಾನು ನಿಮ್ಮ ರೂಂ ಮೇಟ್. ನನಗೆ ಈಗ ರೂಂ allot ಮಾಡಿದ್ದಾರೆ” ಎಂದ. ಬಂದು ತನ್ನ ಗಂಟು ಮೂಟೆಯನ್ನು ರೂಂ ನ ಒಂದು ಮೂಲೆಯಲ್ಲಿ ಇಟ್ಟ. ಆ ಬ್ಯಾಗ್ ನೋಡಿದರೆ ಎಷ್ಟೋ ವರ್ಷದ ಧೂಳು ಅದರ ಮೇಲೆ ಇದ್ದ ಹಾಗೆ ಕಾಣುತ್ತಿತ್ತು. ಅರ್ಧ ಪೇಂಟು ಕಿತ್ತು ಹೋಗಿದ್ದ ಕಪಾಟಿನಲ್ಲಿ ಅವನು ತನ್ನ ವಸ್ತುಗಳನ್ನು ಇಟ್ಟನು. ನಂತರ ಅವನು ನನ್ನನ್ನು ಕೇಳಿದ “ನಿಮ್ಮ ಹೆಸರೇನು? ನಿಮ್ಮ ಊರು ಯಾವುದು?” ನಾನು “ಅಂಕಿತ್ ಹೆಗಡೆ. ನಾನು ಶಿರಸಿಯವನು” ಎಂದೆ. ಅವನ ಮುಖ ಅರಳಿತು. “ನೀವು ಹವ್ಯಕರಾ?” ಅಂತ ಕೇಳಿದ. ನಾನು “ಹೌದು” ಎಂದೆ. ಆಗ ಅವನು “ನಾನು ಅಭಿಷೇಕ್ ಜೊಯ್ಸ್ ಅಂತ. ನಾನು ಕೂಡ ಹವ್ಯಕ. ನಾನು ಸಾಗರದ ಹತ್ತಿರ ಕಟ್ಟಿನಕೇರೆ ಎಂಬ ಊರಿನವನು” ಅಂತ ಹೇಳಿದನು. ನನಗೆ ಒಂಥರಾ ಖುಷಿ. ನಮ್ಮವನು ಇದ್ದಾನಲ್ಲ ನನ್ನ ಜೊತೆ ಎಂದು. ಆ ದಿನ ನನ್ನ ಸೀನಿಯರ್ ಆದರ್ಶ್ ನಾಯಕ್ ನನ್ನ ಭೇಟಿಯಾಗಲು ಬಂದಿದ್ದನು. ಅವನು ಮೂಲತಃ ಅಂಕೋಲಾದವನು. ನಾನು ನಿಪ್ಪಾಣಿಯಲ್ಲಿ ಇದ್ದಾಗ ಅವನು ನನಗೆ ಪರಿಚಯವಾಗಿದ್ದನು. ಅವನ ತಂದೆ ನನ್ನ ತಂದೆಯ ಆತ್ಮೀಯ ಗೆಳೆಯರಾಗಿದ್ದರು. ಅವನು ರೂಮಿಗೆ ಬಂದು ನನ್ನೊಡನೆ ಮಾತನಾಡುತ್ತಿದ್ದನು. ಅಭಿಷೇಕ್ ಜೊಯ್ಸ್ ಸ್ನಾನ ಮಾಡಲು ಬಕೆಟನ್ನು ಎತ್ತುಕೊಂಡು ಹೋದನು. ಆ ಬಕೆಟ್ ನೋಡಿದರೆ ಹೇಸಿಗೆ ಆಗುತ್ತಿತ್ತು. ಬಕೆಟ್ ಖರೀದಿ ಮಾಡಿದ ದಿನದಿಂದ ಇದುವರೆಗೂ ಒಮ್ಮೆಯೂ ಅದನ್ನು ಸ್ವಚ್ಛವಾಗಿ ತೊಳೆದಿರಲಿಲ್ಲ ಎಂಬುದು ಗೊತ್ತಾಗುತ್ತಿತ್ತು.

ಧ್ರುವತಾರೆ

ಸುಮಾರು ೭ ತಿಂಗಳುಗಳ ಬಳಿಕ ನನ್ನ ಆತ್ಮೀಯರಾದ ರಮೇಶಣ್ಣ (ರಮೇಶ್ ಹೆಗಡೆ) ಅವರನ್ನು ಭೇಟಿಯಾದೆ. ಕಳೆದ ವರ್ಷ ನನಗೆ ಅವರು ಬರೆದ "ನೋವಿನಲಿ ನವಿಲು ಗರಿ" (ಕನ್ನಡ ಗಝಲ್ ಗಳು) ಎಂಬ ಪುಸ್ತಕವನ್ನು ಕೊಟ್ಟಿದ್ದರು. ಈ ಬಾರಿ ಅವರ ಇನ್ನೊಂದು ಕವನಗುಚ್ಛ "ಮನದಲ್ಲಿ ಮನೆಯ ಮಾಡಿ..." ಯನ್ನು ಕೊಟ್ಟಿದ್ದಾರೆ. ಅದನ್ನು ಓದಿ ಮುಗಿಸಿದೆ. ಅದರಲ್ಲಿ ಅವರು ನಮ್ಮೆಲ್ಲರ ಹೆಮ್ಮೆಯ ಧ್ರುವತಾರೆ ದಿ|| ಕಲ್ಪನಾ ಚಾವ್ಲಾರ ಬಗ್ಗೆ ಒಂದು ಕವನ ಬರೆದಿದ್ದಾರೆ. ನನಗೆ ತುಂಬಾ ಇಷ್ಟವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಚುಕ್ಕಿ - ಚಂದ್ರರ ಕಡೆಯೇ
ಹೊಳೆವ
ಕಣ್ಣ ನೆಟ್ಟವಳು ;
ಮೊದಲ ಹೆಜ್ಜೆ ಇಟ್ಟವಳು ಇವಳು ...
ಹಕ್ಕಿ - ಪಕ್ಕಿಯ ತೆರದಿ ...
ತಾ - ಹಾರಬೇಕೆಂಬ
ಕನಸನುಟ್ಟವಳು !

ಕನಸುಗಳೇ ಗರಿಗೆದರಿ...
ಎಲ್ಲ ಪರಿಧಿಯ ಮೀರಿ,
ಮೇಲೇರಿ ಹಾರಿದವಳು, ಇವಳು
ತಾಯ್ನೆಲದ ಘನತೆಯನು
ಮುಗಿಲೆತ್ತರ ಸಾರಿದವಳು !
ಓ ಧೀರ ವನಿತೆ...
ಅನಂತದ ಗಗನವೇ
ಅಂತ್ಯ ಹಾಡಿತೆ - ನಿನಗೆ,
-ಮಸಣವಾಯಿತೆ ಕೊನೆಗೆ ?
ಶೋಕಸಾಗರವು
ನಿನ್ನ ತವರುಮನೆಗೆ !
ನಿನ್ನಗಲಿಕೆಯ
ನೋವು - ನೆನಪಾಗಿ
ಕಾಡದಿರದು - ನಮಗೆ !
ಆದರೂ,
ಒಂದು ರೀತಿಯ ಹೆಮ್ಮೆ
ನಿನ್ನ ಸಾವು ;
ನೆಲದಲ್ಲೇ
ತೊದಲು ನುಡಿದೆ,
ಬಾನಲ್ಲಿ ಕೊನೆಗೆ ಮಡಿದೆ !!
ಇನ್ನೇನು ಬೇಕು ಮತ್ತೆ ?
ಹಂಸಗೀತೆಯಲ್ಲೂ
ನೀ - ವೀರ ಗಾಥೆ !!

Saturday, 30 August 2014

ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗದಿರಲಿ

ರತ್ನಾಕರ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯು ಫೇಸ್ಬುಕ್ ಮೂಲಕ ಅನಂತನಿಗೆ  ಪರಿಚಯವಾಗಿದ್ದ. ತಾನು ಬಡ ಕುಟುಂಬದವನು ಎಂದು ರತ್ನಾಕರ ಹೇಳಿದ್ದ. ಅದಕ್ಕೆ ಅನಂತನು ತನ್ನ ಅಣ್ಣನಾದ ಅರವಿಂದನಿಗೆ "ಅಣ್ಣ, ಹೀಗೊಬ್ಬ ಬಡ ವಿದ್ಯಾರ್ಥಿ ಇದ್ದಾನೆ. ಅವನನ್ನು ನಾನು ಹಲವಾರು ಬಾರಿ ಭೇಟಿ ಕೂಡ ಆಗಿದ್ದೇನೆ. ಒಳ್ಳೆಯವನ ಹಾಗೆ ಕಾಣಿಸುತ್ತಾನೆ. ಆರ್ಥಿಕವಾಗಿ ತೊಂದರೆಯಲ್ಲಿದ್ದಾನಂತೆ. ಏನು ಮಾಡೋಣ?" ಎಂದು ಕೇಳಿದ.
ಅರವಿಂದನು "ಹಾಗಿದ್ದರೆ ನಾವಿಬ್ಬರೂ ಸೇರಿ ಅವನಿಗೆ ಸಹಾಯ ಮಾಡೋಣ. ಅವನು ಚೆನ್ನಾಗಿ ಓದಲಿ" ಎಂದನು.
ಅರವಿಂದ ಭಾವುಕ ಜೀವಿ. ಮೊದಲಿನಿಂದಲೂ ಆತ ಸಮಾಜದಲ್ಲಿ ಇತರರ ಒಳಿತಿಗಾಗಿ ಸ್ವಲ್ಪವೂ ಅಹಂ ಇಲ್ಲದೆ ಕೆಲಸ ಮಾಡುತ್ತಿದ್ದ. ಅಂತೂ ರತ್ನಾಕರನಿಗೆ ಆರ್ಥಿಕವಾಗಿ ಸಾಧ್ಯವಾದಷ್ಟು ನೆರವು ನೀಡುವುದು ಎಂದು ತೀರ್ಮಾನವಾಯಿತು. "ರತ್ನಾಕರನು ಪರೀಕ್ಷೆ ಮುಗಿಸಿ ವಾಪಸ್ಸು ಬರಲಿ. ಆಗ ಅವನನ್ನು ಭೇಟಿ ಆಗಿ ಈ ಬಗ್ಗೆ ಮಾತನಾಡಿದರಾಯಿತು" ಎಂದು ಅನಂತನು ಅರವಿಂದನಿಗೆ ಹೇಳಿದನು.
ಒಂದು ದಿನ ಹೀಗೆ ಆಫೀಸ್ ನಲ್ಲಿ ಅನಂತನು ಫೇಸ್ಬುಕ್ ನಲ್ಲಿ ಹಳೆಯ ಮಿತ್ರರೊಡನೆ ಚಾಟ್ ಮಾಡುತ್ತಿರುವಾಗ, ರತ್ನಾಕರನು ಎಲ್ಲೋ ಕಾಮೆಂಟ್ ಮಾಡುತ್ತಾ ಇರುವುದು ಕಂಡು ಬಂತು. ಸಮಯ: ಮಧ್ಯಾಹ್ನ ೨:೩೫. ಇಂದು exam ಇದೆ ಅಂತ ಹೇಳಿದ್ದನಲ್ಲ ರತ್ನಾಕರ. ಇವನು ಇನ್ನೂ ಫೇಸ್ಬುಕ್ ನಲ್ಲೇ ಏನು ಮಾಡುತ್ತಿದ್ದಾನೆ? ಒಮ್ಮೆ VTU website ನಲ್ಲಿ time-table ನೋಡುವುದು ಉತ್ತಮ ಎನಿಸಿತು. ಅದನ್ನು check ಮಾಡಿದಾಗ ಒಂಥರಾ shock ಆಯಿತು. ಅಂದು ಮಧ್ಯಾಹ್ನ ೨ ಘಂಟೆಗೆ Basic Electrical Engineering ಪರೀಕ್ಷೆ ಇತ್ತು. ಆದರೆ ರತ್ನಾಕರ ೩ ಘಂಟೆಯವರೆಗೂ ಫೇಸ್ಬುಕ್ ನಲ್ಲೇ ಕಾಮೆಂಟ್ ಮಾಡುತ್ತಾ ಇದ್ದ. ಇವನು ನಮ್ಮ ಹತ್ತಿರವೇ ಸುಳ್ಳು ಹೇಳಿದನಲ್ಲ ಎಂದು ಅನಂತನಿಗೆ ಬೇಸರವಾಯಿತು.
ಹೀಗೆ ದಿನ ಕಳೆದವು. VTU website ನಲ್ಲಿ ಇಂಜಿನಿಯರಿಂಗ್ ಪರೀಕ್ಷೆಗಳ ಫಲಿತಾಂಶ ಬಂದಿದೆ ಎಂದು ಅನಂತನ ಭಾವ ಅಕ್ಷಯ ಹೇಳಿದನು. ರತ್ನಾಕರನಿಗೆ ಫೇಸ್ಬುಕ್ ನಲ್ಲಿ ಸುಮ್ಮನೆ message ಮಾಡಿ "ತಮಾ result ಏನಾಯಿತು?" ಎಂದು ಅನಂತ ಕೇಳಿದನು. ಅದಕ್ಕೆ ರತ್ನಾಕರನು "ಅಣ್ಣ first class ಆಗಿದೆ" ಎಂದ. ಆದರೆ ಅನಂತನಿಗೆ ರತ್ನಾಕರನ ಮಾತಿನ ಮೇಲೆ ಭರವಸೆ ಇರಲಿಲ್ಲ. ಸ್ವತಃ ಇಂಜಿನಿಯರ್ ಆಗಿದ್ದ ಅನಂತನಿಗೆ VTU site ನಲ್ಲಿ ಯಾರದ್ದೋ result ಹುಡುಕುವುದು ದೊಡ್ಡ ವಿಷಯವಾಗಿರಲಿಲ್ಲ. ಅಂತೂ ರತ್ನಾಕರನ result ಹುಡುಕಿದ ಅನಂತ. ರತ್ನಾಕರ ಎರಡನೇ ಬಾರಿ washout ಆಗಿದ್ದ. ಅಂದರೆ ಎರಡು ವರ್ಷ ಸತತವಾಗಿ ಕಳೆದುಕೊಂಡಿದ್ದ. First year ನಲ್ಲಿ ಹಲವಾರು subject ಗಳು ಇನ್ನೂ back ಇದ್ದವು. ರತ್ನಾಕರನ ಪಕ್ಕದ ಮನೆಯ ಹತ್ತಿರ ಇರುವವರ ವಿಚಾರಿಸಿ ಕೇಳಿದರು ಅನಂತ ಹಾಗು ಅರವಿಂದ. ಆಗ ಒಬ್ಬ ಹಿರಿಯ ವ್ಯಕ್ತಿ ಹೇಳಿದರು "ರತ್ನಾಕರನ ತಂದೆ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಮಗ ಮಾತ್ರ ಹೀಗೆ ನೋಡಿ. ಸ್ವಲ್ಪವೂ ಅವನಿಗೆ ಜವಾಬ್ದಾರಿ ಎನ್ನುವುದಾಗಲಿ ಅಥವಾ ತನ್ನ ಮನೆಯವರು ಆರ್ಥಿಕವಾಗಿ ಗಟ್ಟಿಯಿಲ್ಲ. ಹಾಗಾಗಿ ತಾನು ಕಷ್ಟಪಟ್ಟು ಮುಂದೆ ಬರಬೇಕು ಎಂಬ ಛಲವೇ ಇಲ್ಲ. ಅವರ ಊರಿನ ಇನ್ನೊಬ್ಬ ಹುಡುಗ ಸುಧಾಕರ ಕೂಡ ಇವನ ಹಾಗೆ. ಓದುವುದಿಲ್ಲ. ಕೇವಲ ಫೇಸ್ಬುಕ್, Whatsapp ನಲ್ಲೇ ಮುಳುಗಿರುತ್ತಾನೆ. ಆದರೆ ಸುಧಾಕರನಿಗೆ ಜೀವನಕ್ಕೆ ತಂದೆ ಮಾಡಿಟ್ಟಿರುವ ಒಳ್ಳೆ ಜಮೀನು ಇದೆ. ಅವನು ಹೇಗಾದರೂ ಜೀವನ ಮಾಡಬಲ್ಲ. ಆದರೆ ರತ್ನಾಕರನಿಗೆ ಮನೆಯಲ್ಲಿ ಆಸ್ತಿ ಇಲ್ಲ. ಅವನ ಬುದ್ಧಿಶಕ್ತಿಯೇ ಅವನಿಗೆ ಆಸ್ತಿ. ಆದರೆ ಅವನು ಅದನ್ನೆಲ್ಲ ಬಿಟ್ಟು ಕೇವಲ ಶೋಕಿಲಾಲ ಆಗಿಬಿಟ್ಟಿದ್ದಾನೆ. ಏನು ಮಾಡುವುದು?" ಎಂದರು.
"ಆಯಿತು ಅಂಕಲ್. ನಾವಿನ್ನು ಬರುತ್ತೇವೆ" ಎಂದು ಅನಂತ ಹಾಗು ಅರವಿಂದ ಅಲ್ಲಿಂದ ಹೊರಟರು.
ಆಗ ಅನಂತನು "ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್, whatsapp ವಿದ್ಯಾವಂತರಿಗೆ ಬಹುಬೇಗನೆ ತಲುಪಬೇಕಾದ ಮಾಹಿತಿಗಳನ್ನು ನೀಡುತ್ತಿರುವುದು ವರದಾನವೇ ಸರಿ. ಎಷ್ಟೋ ಬಾರಿ ನಮಗೆ ತಿಳಿಯದೆ ಇದ್ದ ಮಾಹಿತಿಗಳು, ಬಹಳ ದಿನಗಳಿಂದ ಅನಿವಾರ್ಯ ಕಾರಣಗಳಿಂದ ದೂರವಿರುವ ಮಿತ್ರರನ್ನು ಸಂಪರ್ಕಿಸಿ ಅವರೊಂದಿಗೆ ಸಂವಹನ ನಡೆಸಲು ಈ ಎಲ್ಲ ಜಾಲತಾಣಗಳು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅತಿಯಾದರೆ ಅಮೃತವೂ ಕೂಡ ವಿಷ ಎಂಬಂತೆ ಈ ಸೋಶಿಯಲ್ ನೆಟ್ವರ್ಕ್ ಗಳ ಅತಿಯಾದ ಬಳಕೆ ಒಳ್ಳೆಯದಲ್ಲ" ಎಂದನು.
ಅದಕ್ಕೆ ಅರವಿಂದನು "ಹೌದು. ನನಗೂ ಹಾಗೆ ಅನಿಸುತ್ತೆ. ರತ್ನಾಕರನಿಗೆ ಇಂಜಿನಿಯರಿಂಗ್ ಕಷ್ಟವಾದರೆ ಬೇರೆ degree ಮಾಡಲಿ. ಕೇವಲ ಮಾರ್ಕ್ಸ್ ಮೇಲೆ ನಾವು ಯಾರೊಬ್ಬರನ್ನು ಅಳೆಯಲು ಸಾಧ್ಯವಿಲ್ಲ. ಆದರೆ ರತ್ನಾಕರನ ವಿಚಾರದಲ್ಲಿ ಅವನ attitude ಬದಲಾಗಬೇಕು. ಇಲ್ಲವಾದರೆ ಯಾವುದೇ degree ಮಾಡಿದರೂ ಅವನ ಕಥೆ ಅಷ್ಟೆ. ನಾವು ಕೇವಲ suggestion ಕೊಡಬಹುದು. ಆದರೆ ಅವನಿಗೆ ತಾನು ತಪ್ಪು ಮಾಡುತ್ತಿದ್ದೇನೆ ಎಂದು realise ಆಗಬೇಕು. ಅಲ್ಲಿಯ ತನಕ ಹೀಗೆ ಸುಳ್ಳು ಹೇಳುವುದು ಮುಂದುವರಿಸುತ್ತಾ ಇರುತ್ತಾನೆ ಅವನು" ಎಂದನು.
ಅನಂತನು "ನಿಜ ಅರವಿಂದಣ್ಣ. ಹಿಂದೆ ಕುಡಿತ, ಡ್ರಗ್ಸ್‌, ಸಿಗರೇಟ್, ಜೂಜು ಇತ್ಯಾದಿಗಳನ್ನು ಚಟ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಅಂತೆಯೇ ಮೊಬೈಲ್‌, ಫೇಸ್‌ಬುಕ್‌ ಅಥವಾ ಇಂಟರ್ನೆಟ್‌ನ ಇತರ ಸೌಕರ್ಯಗಳ ಅತಿಯಾದ ನಿರಂತರ ಬಳಕೆ ಆಧುನಿಕ ವ್ಯಸನಗಳಾಗಿವೆ. ಹಾಗಾಗಿ ಸಾಮಾಜಿಕ ಜಾಲತಾಣಗಳನ್ನು ಮಿತಿಯಲ್ಲಿ ಬಳಸಿದರೆ ಒಳಿತು. ಮುಖ್ಯವಾಗಿ ಯುವ ಜನಾಂಗದವರು ಎಚ್ಚೆತ್ತುಕೊಳ್ಳಬೇಕು" ಎಂದನು.



Wednesday, 27 August 2014

ರಕ್ತ ಸಂಬಂಧ

ಅಂದು ಶನಿವಾರ. ಆ ದಿನ ಶರತ್ ಗೆ ಸಂತಸದ ಕ್ಷಣ. ಹಲವಾರು ದಿನಗಳ ಪ್ರಯತ್ನದ ಬಳಿಕ ನೌಕರಿ ಸಿಕ್ಕಿತ್ತು. ಸೋಮವಾರದಿಂದ ಹೊಸ ಕಂಪೆನಿಯನ್ನು join ಆಗಬೇಕಿತ್ತು. ಆತ ತನಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಬ್ಯಾಗ್ ನಲ್ಲಿ ತುಂಬಿದ. ಆಗ ಕುಮಟಾದಿಂದ ಶರತನ ಚಿಕ್ಕಮ್ಮ ಕಲಾವತಿ ಬಂದಳು. "Job ಸಿಕ್ಕಿದ ಖುಷಿಯಲ್ಲಿ ನಮ್ಮನ್ನೆಲ್ಲಾ ಮರೆಯಬೇಡ ಶರತ" ಎಂದು ಹೇಳಿದಳು ಚಿಕ್ಕಮ್ಮ. "ನಿಮ್ಮನ್ನೆಲ್ಲಾ ಹೇಗೆ ಮರೆಯಲು ಸಾಧ್ಯ? ನಿಮ್ಮ ಮಾರ್ಗದರ್ಶನವು ನನಗೆ ಯಾವಾಗಲು ಅಗತ್ಯ" ಎಂದನು ಶರತ್.
ಶರತನು ಅಜ್ಜನ ಮನೆಗೆ ಹೋಗದೆ ತುಂಬಾ ದಿನಗಳು ಆಗಿದ್ದವು. ಒಮ್ಮೆ ಅಜ್ಜಿ, ಮಾವ, ಅತ್ತೆಯನ್ನು ಭೇಟಿಯಾಗಿ ಹೋಗಬಹುದಲ್ಲ ಎಂದೆನಿಸಿತು. ಚಿಕ್ಕಮ್ಮನ ಜೊತೆ ಶರತನು ಅಜ್ಜನ ಮನೆಗೆ ಹೊರಟ. ಶಿರಸಿಯಿಂದ ಸುಮಾರು ೧೫ ಕಿ.ಮಿ. ಆಗುತ್ತಿತ್ತು ಆ ಹಳ್ಳಿ. ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಮೇಲೆ ಹೊರಟನು ಅವನು ಚಿಕ್ಕಮ್ಮನ ಜೊತೆ. ಅಜ್ಜನ ಮನೆಗೆ ಬಂದು ಇಳಿದನು ಶರತ್. ಅಜ್ಜಿಗೆ ಮೊಮ್ಮಗನನ್ನು ನೋಡಿ ಆನಂದಭಾಷ್ಪ. "ಎಷ್ಟು ದಿನವಾಗಿತ್ತು ಮರಿ ನಿನ್ನನ್ನು ನೋಡದೆ. ಚೆನ್ನಾಗಿದ್ದೀಯ?" ಎಂದಳು ಅಜ್ಜಿ.
"ನಾನು ಚೆನ್ನಾಗಿ ಇದ್ದೇನೆ. ನನಗೆ ನೌಕರಿ ಸಿಕ್ಕಿದೆ ಅಜ್ಜಿ. ಇವತ್ತು ರಾತ್ರಿ VRL ಬಸ್ ನಲ್ಲಿ ಬೆಂಗಳೂರಿಗೆ ಪಯಣ" ಎಂದನು ಶರತ್.
"ಆಗಲಿ ಮಗ. ಒಳ್ಳೆ ನೌಕರಿ ಸಿಕ್ಕಿತಲ್ಲ. ಇನ್ನು ಒಳ್ಳೆ ಹೆಂಡತಿ ಕೂಡ ಸಿಗಲಿ" ಎಂದು ಶುಭ ಹಾರೈಸಿದಳು.
"ತಮಾ ಎಷ್ಟು ವರ್ಷವಾಗಿತ್ತು ನಿನ್ನನ್ನು ನೋಡದೆ. ಉನ್ನತ ವ್ಯಾಸಂಗಕ್ಕಾಗಿ ನೀನು ಶಿರಸಿ ಊರನ್ನು ಬಿಟ್ಟ ಬಳಿಕ ನಿನ್ನನ್ನು ನೋಡಿಯೇ ಇರಲಿಲ್ಲ. ಇವತ್ತು ನೋಡಿ ಸಂತೋಷವಾಯಿತು" ಎಂದಳು ಶರತನ ಅತ್ತೆ ಮೇಧಾ.
"ಇಂದು ಮುಹೂರ್ತ ಕೂಡಿ ಬಂದಿದೆ ನೋಡಿ ಅತ್ತೆ" ಎಂದು ಶರತ್ ನಗುತ್ತಾ ಹೇಳಿದನು.
ಒಳಗೆ ಹೋಗಿ ಚಹಾ ಕುಡಿದು ಹಲಸಿನಕಾಯಿ ಸಂಡಿಗೆ ತಿನ್ನುತ್ತ ತಾನು ಇಲ್ಲಿ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡನು ಶರತ್. ಆತನ ಕಣ್ಣಲ್ಲಿ ನೀರು ತುಂಬಿತ್ತು.
ಆಗ "ನನಗಿಂತಲೂ ಎತ್ತರವಾಗಿಬಿಟ್ಟಿದ್ದೀಯಲ್ಲ ಶರತ್. ನೆನಪಿದೆಯಾ? ನೀನು ಚಿಕ್ಕವನಾಗಿದ್ದಾಗ ಇದೇ ಜಾಗದಲ್ಲಿ ಕ್ರಿಕೆಟ್ ಬ್ಯಾಟ್, ಬಾಲ್, ಸ್ಟಂಪ್ ಎಲ್ಲಾ ಇಡುತಿದ್ದೆ" ಎಂದು ಕೊಟ್ಟಿಗೆಯ ಹಿಂಭಾಗದಲ್ಲಿ ಇರುವ ಒಂದು ಚೀಲವನ್ನು ತೋರಿಸುತ್ತ ಹೇಳಿದನು ಶರತನ ಮಾವ ರಘುರಾಮ.
"ನೆನಪಿದೆ ಮಾವ. ಅವೆಲ್ಲಾ golden moments" ಎಂದನು ಶರತ್.
ಆಗ ಮಾವನ ಹಿರಿಯ ಮಗಳು ಶಿಲ್ಪಾ ಬಂದಳು. ಇವರೆಲ್ಲಾ ತಮ್ಮ ಮನೆಗೆ ಯಾಕಾದರೂ ಬಂದಿದ್ದಾರೋ ಎಂಬ ಮುಖ ಮಾಡುತ್ತಾ ಮನಸ್ಸಿಲ್ಲದ ಮನಸ್ಸಿನಿಂದ "ಶರತ್ ಭಾವ, ಕಲತ್ತೆ" ಎಂದು formality ಗೋಸ್ಕರ ಮಾತನಾಡಿಸಿ ತಾನು ಮೊಬೈಲ್ ನಲ್ಲಿ ಯಾರೊಟ್ಟಿಗೋ ಮಾತನಾಡುತ್ತ busy ಆದಳು.
ಶಿಲ್ಪಾಳಿಗೆ ಇಬ್ಬರು ತಂಗಿಯರು. ಸುರಕ್ಷಾ ಮತ್ತು ಸಮೀಕ್ಷಾ (ಅವಳಿ ಸಹೋದರಿಯರು). ಅವರಿಬ್ಬರೂ ಈಗ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರು ಕೂಡ ಇವನು ಯಾಕಾದರೂ ಬಂದ ಎನ್ನುವ ಮುಖ ಮಾಡುತ್ತ formality ಗೋಸ್ಕರ "ಶರತಣ್ಣ" ಎಂದು ಮಾತನಾಡಿಸಿ ನಾಪತ್ತೆ ಆದರು. ಅವನಿಗೆ ವಿಚಿತ್ರವೆನಿಸಿತು. "ಸುರಕ್ಷಾ ಸಮೀಕ್ಷಾ ಇಬ್ಬರನ್ನೂ ಎತ್ತಿ ಆಡಿಸಿದವನು ನಾನು. ಇವರೂ ಕೂಡ ಹಿರಿಯಕ್ಕನ ಹಾಗೆ ಆಗಿಬಿಟ್ಟರಾ?" ಎನಿಸಿತು.
"ಶಿಲ್ಪಾಳಿಗೆ ಮೊದಲಿನಿಂದಲೂ ದೊಡ್ಡಸ್ತಿಕೆ ಸೊಕ್ಕು. ಆದರೆ ಅವಳಿ ಸಹೋದರಿಯರು ಹೀಗೆ ಇರಲಿಲ್ಲ. ಅವರು ಕೂಡ ಬದಲಾಗಿಬಿಟ್ಟರಾ? ಶಾಲೆಗೆ ಅವರಿಬ್ಬರ admission ಮಾಡಿಸುವಾಗ ತಾನು ಹಾಗೂ ತನ್ನ ತಾಯಿ ಮುಂದಾಳತ್ವ ವಹಿಸಿದ್ದು ಇವರಿಗೆ ನೆನಪಿಲ್ಲವೇ? ಸದಾ ತನ್ನ ಸ್ವಂತ ತಂಗಿಯರ ಹಾಗೆ ನೋಡಿಕೊಂಡಿದ್ದೆ. ಆದರೆ ಈಗ ಅದಕ್ಕೆ ಬೆಲೆ ಇಲ್ಲವೇ? ರಕ್ತ ಸಂಬಂಧ ಎನ್ನುವುದು ಇಷ್ಟೇನಾ?" ಎಂದುಕೊಂಡು ಒಮ್ಮೆ ಮನಸ್ಸಿಗೆ ನೋವಾಯಿತು.
ಆದರೆ ಮರುಕ್ಷಣ ಶರತ್ ಗೆ ಅಲ್ಲಿ ಗೋಡೆಯ ಮೇಲೆ ತನ್ನ ಸ್ವರ್ಗವಾಸಿ ಅಜ್ಜನ ಫೋಟೋ ಕಾಣಿಸಿತು.ಅಜ್ಜನ ಫೋಟೋಕ್ಕೆ ನಮಸ್ಕಾರ ಮಾಡಿ "ಪರಿವರ್ತನೆ ಜಗದ ನಿಯಮ. ನಾವು ಒಳ್ಳೆಯದನ್ನು ಮಾಡಿದ್ದರೆ ಒಂದಲ್ಲಾ ಒಂದು ದಿನ ನಮಗೂ ಒಳ್ಳೆಯದೇ ಆಗುತ್ತದೆ. भगवान के घर मे  देर है, अंधेर नही.  ನನಗೆ ಒಳ್ಳೆ ಉದ್ಯೋಗ ಸಿಕ್ಕಿದೆ. ನಿಮ್ಮ ಆಶೀರ್ವಾದ ಸದಾ ಇರಲಿ" ಎಂದು ಮನಸ್ಸಿನಲ್ಲೇ ಹೇಳಿಕೊಂಡ. 
ಅಜ್ಜಿ, ಮಾವ, ಅತ್ತೆಗೆ ನಮಸ್ಕಾರ ಮಾಡಿ "ಬರುತ್ತೇನೆ" ಎಂದ ಶರತ್ ಚಿಕ್ಕಮ್ಮನ ಜೊತೆ ವಾಪಸ್ ಶಿರಸಿಗೆ ಹೋದ. ರಕ್ತ ಸಂಬಂಧ ಎನ್ನುವುದಕ್ಕಿಂತ ಭಾವನಾತ್ಮಕ ಸಂಬಂಧ ಶ್ರೇಷ್ಠವಾದುದು ಎಂದುಕೊಂಡು ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು VRL ಬಸ್ ಏರಿ ಕುಳಿತ.






Tuesday, 26 August 2014

"ಒಂಥರಾ ವಿಚಿತ್ರ ಅನುಭವ"

                        

ಆಗಸ್ಟ್ ೭ ರ ಸಂಜೆ ನನ್ನ ರೂಮ್ ಹತ್ತಿರ ಒಬ್ಬ ವ್ಯಕ್ತಿ ಬಂದಿದ್ದ. ಸುಮಾರು ೪೦-೪೫ ರ ಪ್ರಾಯದವನು.
ಅವನು "ನಮಸ್ಕಾರ ಸರ್. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಹತ್ತಿರ ಯಾವ್ದೋ PG ಒಂದರಲ್ಲಿ ಸಂದೀಪ ಎಂಬ ಹುಡುಗ ಇದ್ದಾನೆ. ಅವನನ್ನು ಹುಡುಕುತ್ತ ಬಂದಿದ್ದೆ. ನಿಮಗೇನಾದರೂ ಅವನ ಪರಿಚಯ ಉಂಟಾ?" ಎಂದು ನನ್ನನ್ನು ಕೇಳಿದ.

"ನನಗೆ ಗೊತ್ತಿಲ್ಲ ಸ್ವಾಮಿ. ಇಲ್ಲಿ ಹಲವಾರು PG ಗಳು ಇವೆ" ಎಂದು ನಾನು ಹೇಳಿದೆ.
ಆಗ ಅವನು "ನಾನು ಕುಂದಾಪುರದ ಹತ್ತಿರದ ಸಾಲಿಗ್ರಾಮದವನು. ಸಂದೀಪ ಇಲ್ಲೇ ಇದ್ದಾನೆ ಅಂತ ಹೇಳಿದ್ದ. ನಾನು ಆ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಕಡೆ ಇರುವ ೨-೩ PG ಗಳಲ್ಲಿ ವಿಚಾರಿಸಿದೆ. ಆದರೆ ಅಲ್ಲಿ ಆತ ಸಿಗಲಿಲ್ಲಿ. ಅಲ್ಲಿ ಕನ್ನಡ ಮಾತನಾಡುವವರು ಕಡಿಮೆ. ನೀವು ಸಿಕ್ಕಿದ್ದು ತುಂಬಾ ಸಂತೋಷವಾಯಿತು ಸರ್. ನಿಮ್ಮ ಊರು ಯಾವುದು?" ಅಂತ ಕೇಳಿದ.
 

ಆಗ ನಾನು "ನನ್ನ ಊರು ಯಾವುದಾದರೆ ನಿಮಗೇನು? ನಿಮ್ಮ ಹೆಸರು ಗಣೇಶ ಅಂತ ನನಗೆ ಗೊತ್ತು" ಎಂದೆ.
ಅದಕ್ಕೆ ಅವನು "ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯಿತು ಮಾರಾಯ್ರೇ?" ಎಂದ.
ಇದರ ನಂತರ ನಾನು ಅವನಿಗೆ ಹೇಳಿದ್ದು ಕೇಳಿ ಅವನು ಅಲ್ಲಿಂದ ಪರಾರಿಯಾದ.

೩-೪ ವರ್ಷಗಳ ಹಿಂದೆ ನಾನು ಧಾರವಾಡದ ಗಾಂಧೀನಗರದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಬಂದಿದ್ದ. ಅವನು "ಇಲ್ಲಿ ಸಂದೀಪ ಇದ್ದಾನಾ? ನಾನು ಅವನನ್ನು ಹುಡುಕುತ್ತ ಬಂದಿದ್ದೆ. ಇಲ್ಲೇ ಹತ್ತಿರದಲ್ಲಿ ಇರುವ ಈಶ್ವರ ದೇವಸ್ಥಾನದ ಹತ್ತಿರ ಅವನು ಇರುತ್ತೇನೆ ಎಂದು ಹೇಳಿದ್ದ. ನಿಮಗೆ ಗೊತ್ತುಂಟಾ? ನಾನು ಕುಂದಾಪುರದ ಹತ್ತಿರದ ಸಾಲಿಗ್ರಾಮದವನು.ನನ್ನ ಹೆಸರು ಗಣೇಶ. ವಾಪಸ್ ಹೋಗಲು ನನ್ನ ಬಳಿ ಹಣ ಇಲ್ಲ. ಸ್ವಲ್ಪ ಸಹಾಯ ಮಾಡುತ್ತೀರಾ?" ಎಂದಿದ್ದ.
ನಾನು ಹಾಗೂ ನನ್ನ ಗೆಳೆಯ ಅವನನ್ನು ಬೈದು ಓಡಿಸಿದ್ದೆವು.

ನಿನ್ನೆ ಸಿಕ್ಕಿದವನು ಅದೇ ವ್ಯಕ್ತಿ !!!!!!!!!
ನನಗೆ ಅವನ ಮುಖ ನೆನಪು ಇರಲಿಲ್ಲ. ಆದರೆ ಸಂದೀಪ, ಕುಂದಾಪುರದ ಸಾಲಿಗ್ರಾಮ ಎಂದ ತಕ್ಷಣ ನೆನಪಿಗೆ ಬಂತು ಇವನೇ ಆ ವ್ಯಕ್ತಿ ಎಂದು.

ಗೆಳೆಯರೆಲ್ಲಾ ಸಿಕ್ಕಾಪಟ್ಟೆ ನಕ್ಕಿದರು. ಅಂತು ಆ fraud ಗಣೇಶ ನಿನ್ನನ್ನು ಹುಡುಕಿಕೊಂಡು ಬೆಂಗಳೂರಿಗೂ ಬಂದ ಎಂದು.
ಹ್ಹ ಹ್ಹ ಹ್ಹ....