ಯಾವತ್ತೂ ತಂದೆ ತಾಯಿಯನ್ನು ಬಿಟ್ಟು ಇರದಿದ್ದ ನನಗೆ ದ್ವಿತೀಯ ಪಿ.ಯು.ಸಿ. ಮುಗಿದ ಬಳಿಕ
ಇಂಜಿನಿಯರಿಂಗ್ ಮಾಡಲು ಮನೆ ಬಿಟ್ಟು ಧಾರವಾಡಕ್ಕೆ ಹೋಗಬೇಕಾಯಿತು. ಮನಸ್ಸು ಒಪ್ಪದಿದ್ದರೂ
ಶಿರಸಿಯಲ್ಲಿ ಇಂಜಿನಿಯರಿಂಗ್ ಕಾಲೇಜ್ ಇಲ್ಲವಲ್ಲ, ಹೋಗಲೇಬೇಕು ಎಂದು ಹೊರಟೆ.
ಎಸ್.ಡಿ.ಎಂ. ಕಾಲೇಜ್ ನ ಕ್ಯಾಂಪಸ್ ಅದ್ಭುತವಾಗಿತ್ತು. ಆದರೆ ಬಯಲು ಸೀಮೆಯ ಹವಾಮಾನಕ್ಕೆ
ನಾನು ಹೊಂದುಕೊಂಡು ಹೋಗಬಹುದೇ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತಿತ್ತು. ಎರಡು
ತಿಂದರೆ ಹೆಚ್ಚು ಒಂದು ತಿಂದರೆ ಕಮ್ಮಿ. ಆ ರೀತಿ ಇತ್ತು ನನ್ನ ಆರೋಗ್ಯ. ಅಂತು ಕಾಲೇಜ್
ಎಡ್ಮಿಶನ್ ಮುಗಿಯಿತು. ಕಾಲೇಜ್ ಹಾಸ್ಟೆಲ್ ನಲ್ಲೇ ಇರುವುದು ಎಂದು ಕೂಡ ನಿರ್ಣಯ
ತೆಗೆದುಕೊಳ್ಳಲಾಯಿತು. ಹಾಸ್ಟೆಲ್ ಗೆ ಎಡ್ಮಿಶನ್ ಮಾಡಿಸಲು ಹೊರಟೆವು. ವಿಜಯ್ ರಾವ್ ಎಂಬ
ವ್ಯಕ್ತಿಯ ಪರಿಚಯವಾಯಿತು. ಅವರು ಕಾಲೇಜ್ ನಲ್ಲಿ ಅಕೌಂಟ್ಸ್ ಸೆಕ್ಷನ್ ನಲ್ಲಿ ಕೆಲಸ
ಮಾಡುತ್ತಿದ್ದರು. ಅವರ ನೆಂಟರು ವಿಜಯಾ ಬ್ಯಾಂಕ್ ನಲ್ಲಿ ಇದ್ದರು. ನನ್ನ ತಂದೆ ಕೂಡ
ವಿಜಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ತಂದೆಗೂ ಅವರು ಪರಿಚಯವಿದ್ದರು.
ಹಾಗಾಗಿ “ಸರ್, ನೀವು ಕಾಳಜಿ ಮಾಡಬೇಡಿ. ನಾನು ಇದ್ದೇನೆ. ನಿಮ್ಮ ಮಗನಿಗೆ ಬೇಕಾದ ರೂಂ
ಮೇಟ್ ಕೊಡಿಸುತ್ತೇನೆ. ಆದಷ್ಟು ನಿಮ್ಮ ಊರಿನವರು ಅಥವಾ ಹವ್ಯಕರು ಆಗಲಿ” ಎಂದರು. ವಿಜಯ್
ರಾವ್ ನಿಜಕ್ಕೂ ಒಬ್ಬ ನಿಗರ್ವಿ, ಸರಳ ವ್ಯಕ್ತಿತ್ವ ಹೊಂದಿದ್ದ ಮನುಷ್ಯ ಆಗಿದ್ದರು. ನಾನು
ಸ್ವಲ್ಪ ನರ್ವಸ್ ಆಗಿದ್ದೆ. ವಿಜಯ್ ರಾವ್ ಅವರು ಮೂಲತಃ ಮಂಗಳೂರಿನವರು. ಆದರೆ ಅವರು
ಧಾರವಾಡಕ್ಕೆ ಬಂದು ೨೫ ವರ್ಷವಾಗಿತ್ತು. ತುಳು ಮಾತನಾಡುತ್ತಿದ್ದರು ದಕ್ಷಿಣ ಕನ್ನಡದ
ಸುಮಾರು ಶೆಟ್ಟಿ ಹುಡುಗರ ಜೊತೆ. ಕೆಲವು ಶೆಟ್ಟಿ ಸೀನಿಯರ್ಸ್ ಪರಿಚಯವಾದರು. “ಅವರ್ಯಾರೂ
ಹಾಸ್ಟೆಲ್ ನಲ್ಲಿ ಇರುವುದಿಲ್ಲ. ಗಾಂಧಿನಗರದಲ್ಲಿ ಇರ್ತಾರೆ. ಏನಾದರು ತೊಂದರೆ ಆದರೆ,
ಯಾರಾದರು ragging ಮಾಡಿದರೆ ಇವರಿಗೆ ತಿಳಿಸು. ಇವರು ನೋಡಿಕೊಳ್ಳುತ್ತಾರೆ” ಎಂದರು
ವಿಜಯ್ ರಾವ್. ಅದರಲ್ಲಿ ಒಬ್ಬ ಆದಿತ್ಯ ಶೆಟ್ಟಿ, ಇನ್ನೊಬ್ಬ ಅವಿನಾಶ್ ಶೆಟ್ಟಿ. ಉದ್ದ
ಕೂದಲು (ಆಗಿನ ಮಹೇಂದ್ರ ಸಿಂಗ್ ಧೋನಿ ತರಹ), ಕಿವಿಗೆ ಲೋಲಾಕ್, ಕೈಗೆ ಬಳೆ, ಕುತ್ತಿಗೆಗೆ
ಚೈನ್, ಆ ಚೈನ್ ಗೆ ಜೋತಾಡುತ್ತಿದ್ದ ಬ್ಲೇಡ್, ಬೆಕ್ಕಿನ ಕಣ್ಣು, ಕೆನ್ನೆಯ ಮೇಲೆ ಏನೋ
ಗಾಯದ ಕಲೆ. ನೋಡಲು ಖತರ್ನಾಕ್ ಇದ್ದ ಆತ. ಅವನ ಮೊಬೈಲ್ ನಂಬರ್ ಅನ್ನು ನನಗೆ ನೀಡಿದ.
“ತಮಾ, ಅರ್ಜೆಂಟ್ ಇದ್ದರೆ message ಮಾಡು" ಎಂದ. ಅದಕ್ಕೆ ನಾನು “ನನ್ನ ಹತ್ತಿರ ಮೊಬೈಲ್
ಇಲ್ಲ ಅಣ್ಣ. ನಾನು ಕಾಯಿನ್ ಬಾಕ್ಸ್ ನಿಂದ ನಿಮಗೆ ಕಾಲ್ ಮಾಡ್ತೇನೆ " ಎಂದೆ. ಆಯಿತು
ಎಂದು ಅವನು ಯಮಹಾ ಆರ್.ಎಕ್ಸ್ ಬೈಕ್ ಮೇಲೆ ಹೋದ. ನನಗೆ ಹಾಸ್ಟೆಲ್ ನಲ್ಲಿ ರೂಂ ನಂಬರ್
೬೩೬ ಕೊಟ್ಟಿದ್ದರು. “ಅಲ್ಲಿ ಇನ್ನು ಇಬ್ಬರು ಬರಲಿದ್ದಾರೆ ನಿನ್ನ ರೂಂ ಗೆ. ಸಧ್ಯ ನೀನು
ಒಬ್ಬನೇ ಇರಬಹುದು. ಕೆಳಗಿನ ವಿಂಗ್ ನಲ್ಲಿ ಫೈನಲ್ ಇಯರ್ ಸ್ಟೂಡೆಂಟ್ಸ್ ಇದ್ದಾರೆ.
ಅವರಿಂದ ದೂರ ಇರು. ಅವರು ಜೂನಿಯರ್ಸ್ ಗೆ ತೊಂದರೆ ಕೊಡಬಹುದು. ರಾತ್ರಿ ೧೦:೩೦ರ ನಂತರ
ರೂಂ ಹೊರಗೆ ಬರಬೇಡ” ಎಂದು ಹೇಳಿದರು ಹಾಸ್ಟೆಲ್ ಮ್ಯಾನೇಜರ್ ಜೋಶಿ ಸರ್. “ಹಾಸ್ಟೆಲ್
ವಾರ್ಡನ್ ನಾಳೆ ಬರುತ್ತಾರೆ. ಅವರನ್ನ ಭೇಟಿ ಆಗು. ಅವರ ಹೆಸರು ಎ.ವಿ.ಬಳ್ಳುಳಾಯ ಅಂತ.
ಅವರು ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ನ ಪ್ರೊಫೆಸರ್” ಅಂತ ಹೇಳಿದರು ಜೋಶಿಯವರು.
ಮರುದಿನ ನನ್ನ ರೂಂ ಗೆ ಒಬ್ಬ ಬಂದ. ಅವನು ಹೆದರುತ್ತ ಬಂದ. “ನಾನು ನಿಮ್ಮ ರೂಂ ಮೇಟ್.
ನನಗೆ ಈಗ ರೂಂ allot ಮಾಡಿದ್ದಾರೆ” ಎಂದ. ಬಂದು ತನ್ನ ಗಂಟು ಮೂಟೆಯನ್ನು ರೂಂ ನ ಒಂದು
ಮೂಲೆಯಲ್ಲಿ ಇಟ್ಟ. ಆ ಬ್ಯಾಗ್ ನೋಡಿದರೆ ಎಷ್ಟೋ ವರ್ಷದ ಧೂಳು ಅದರ ಮೇಲೆ ಇದ್ದ ಹಾಗೆ
ಕಾಣುತ್ತಿತ್ತು. ಅರ್ಧ ಪೇಂಟು ಕಿತ್ತು ಹೋಗಿದ್ದ ಕಪಾಟಿನಲ್ಲಿ ಅವನು ತನ್ನ ವಸ್ತುಗಳನ್ನು
ಇಟ್ಟನು. ನಂತರ ಅವನು ನನ್ನನ್ನು ಕೇಳಿದ “ನಿಮ್ಮ ಹೆಸರೇನು? ನಿಮ್ಮ ಊರು ಯಾವುದು?”
ನಾನು “ಅಂಕಿತ್ ಹೆಗಡೆ. ನಾನು ಶಿರಸಿಯವನು” ಎಂದೆ. ಅವನ ಮುಖ ಅರಳಿತು. “ನೀವು
ಹವ್ಯಕರಾ?” ಅಂತ ಕೇಳಿದ. ನಾನು “ಹೌದು” ಎಂದೆ. ಆಗ ಅವನು “ನಾನು ಅಭಿಷೇಕ್ ಜೊಯ್ಸ್ ಅಂತ.
ನಾನು ಕೂಡ ಹವ್ಯಕ. ನಾನು ಸಾಗರದ ಹತ್ತಿರ ಕಟ್ಟಿನಕೇರೆ ಎಂಬ ಊರಿನವನು” ಅಂತ ಹೇಳಿದನು.
ನನಗೆ ಒಂಥರಾ ಖುಷಿ. ನಮ್ಮವನು ಇದ್ದಾನಲ್ಲ ನನ್ನ ಜೊತೆ ಎಂದು. ಆ ದಿನ ನನ್ನ ಸೀನಿಯರ್
ಆದರ್ಶ್ ನಾಯಕ್ ನನ್ನ ಭೇಟಿಯಾಗಲು ಬಂದಿದ್ದನು. ಅವನು ಮೂಲತಃ ಅಂಕೋಲಾದವನು. ನಾನು
ನಿಪ್ಪಾಣಿಯಲ್ಲಿ ಇದ್ದಾಗ ಅವನು ನನಗೆ ಪರಿಚಯವಾಗಿದ್ದನು. ಅವನ ತಂದೆ ನನ್ನ ತಂದೆಯ
ಆತ್ಮೀಯ ಗೆಳೆಯರಾಗಿದ್ದರು. ಅವನು ರೂಮಿಗೆ ಬಂದು ನನ್ನೊಡನೆ ಮಾತನಾಡುತ್ತಿದ್ದನು.
ಅಭಿಷೇಕ್ ಜೊಯ್ಸ್ ಸ್ನಾನ ಮಾಡಲು ಬಕೆಟನ್ನು ಎತ್ತುಕೊಂಡು ಹೋದನು. ಆ ಬಕೆಟ್ ನೋಡಿದರೆ
ಹೇಸಿಗೆ ಆಗುತ್ತಿತ್ತು. ಬಕೆಟ್ ಖರೀದಿ ಮಾಡಿದ ದಿನದಿಂದ ಇದುವರೆಗೂ ಒಮ್ಮೆಯೂ ಅದನ್ನು
ಸ್ವಚ್ಛವಾಗಿ ತೊಳೆದಿರಲಿಲ್ಲ ಎಂಬುದು ಗೊತ್ತಾಗುತ್ತಿತ್ತು.
No comments:
Post a Comment