Saturday, 30 August 2014

ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗದಿರಲಿ

ರತ್ನಾಕರ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯು ಫೇಸ್ಬುಕ್ ಮೂಲಕ ಅನಂತನಿಗೆ  ಪರಿಚಯವಾಗಿದ್ದ. ತಾನು ಬಡ ಕುಟುಂಬದವನು ಎಂದು ರತ್ನಾಕರ ಹೇಳಿದ್ದ. ಅದಕ್ಕೆ ಅನಂತನು ತನ್ನ ಅಣ್ಣನಾದ ಅರವಿಂದನಿಗೆ "ಅಣ್ಣ, ಹೀಗೊಬ್ಬ ಬಡ ವಿದ್ಯಾರ್ಥಿ ಇದ್ದಾನೆ. ಅವನನ್ನು ನಾನು ಹಲವಾರು ಬಾರಿ ಭೇಟಿ ಕೂಡ ಆಗಿದ್ದೇನೆ. ಒಳ್ಳೆಯವನ ಹಾಗೆ ಕಾಣಿಸುತ್ತಾನೆ. ಆರ್ಥಿಕವಾಗಿ ತೊಂದರೆಯಲ್ಲಿದ್ದಾನಂತೆ. ಏನು ಮಾಡೋಣ?" ಎಂದು ಕೇಳಿದ.
ಅರವಿಂದನು "ಹಾಗಿದ್ದರೆ ನಾವಿಬ್ಬರೂ ಸೇರಿ ಅವನಿಗೆ ಸಹಾಯ ಮಾಡೋಣ. ಅವನು ಚೆನ್ನಾಗಿ ಓದಲಿ" ಎಂದನು.
ಅರವಿಂದ ಭಾವುಕ ಜೀವಿ. ಮೊದಲಿನಿಂದಲೂ ಆತ ಸಮಾಜದಲ್ಲಿ ಇತರರ ಒಳಿತಿಗಾಗಿ ಸ್ವಲ್ಪವೂ ಅಹಂ ಇಲ್ಲದೆ ಕೆಲಸ ಮಾಡುತ್ತಿದ್ದ. ಅಂತೂ ರತ್ನಾಕರನಿಗೆ ಆರ್ಥಿಕವಾಗಿ ಸಾಧ್ಯವಾದಷ್ಟು ನೆರವು ನೀಡುವುದು ಎಂದು ತೀರ್ಮಾನವಾಯಿತು. "ರತ್ನಾಕರನು ಪರೀಕ್ಷೆ ಮುಗಿಸಿ ವಾಪಸ್ಸು ಬರಲಿ. ಆಗ ಅವನನ್ನು ಭೇಟಿ ಆಗಿ ಈ ಬಗ್ಗೆ ಮಾತನಾಡಿದರಾಯಿತು" ಎಂದು ಅನಂತನು ಅರವಿಂದನಿಗೆ ಹೇಳಿದನು.
ಒಂದು ದಿನ ಹೀಗೆ ಆಫೀಸ್ ನಲ್ಲಿ ಅನಂತನು ಫೇಸ್ಬುಕ್ ನಲ್ಲಿ ಹಳೆಯ ಮಿತ್ರರೊಡನೆ ಚಾಟ್ ಮಾಡುತ್ತಿರುವಾಗ, ರತ್ನಾಕರನು ಎಲ್ಲೋ ಕಾಮೆಂಟ್ ಮಾಡುತ್ತಾ ಇರುವುದು ಕಂಡು ಬಂತು. ಸಮಯ: ಮಧ್ಯಾಹ್ನ ೨:೩೫. ಇಂದು exam ಇದೆ ಅಂತ ಹೇಳಿದ್ದನಲ್ಲ ರತ್ನಾಕರ. ಇವನು ಇನ್ನೂ ಫೇಸ್ಬುಕ್ ನಲ್ಲೇ ಏನು ಮಾಡುತ್ತಿದ್ದಾನೆ? ಒಮ್ಮೆ VTU website ನಲ್ಲಿ time-table ನೋಡುವುದು ಉತ್ತಮ ಎನಿಸಿತು. ಅದನ್ನು check ಮಾಡಿದಾಗ ಒಂಥರಾ shock ಆಯಿತು. ಅಂದು ಮಧ್ಯಾಹ್ನ ೨ ಘಂಟೆಗೆ Basic Electrical Engineering ಪರೀಕ್ಷೆ ಇತ್ತು. ಆದರೆ ರತ್ನಾಕರ ೩ ಘಂಟೆಯವರೆಗೂ ಫೇಸ್ಬುಕ್ ನಲ್ಲೇ ಕಾಮೆಂಟ್ ಮಾಡುತ್ತಾ ಇದ್ದ. ಇವನು ನಮ್ಮ ಹತ್ತಿರವೇ ಸುಳ್ಳು ಹೇಳಿದನಲ್ಲ ಎಂದು ಅನಂತನಿಗೆ ಬೇಸರವಾಯಿತು.
ಹೀಗೆ ದಿನ ಕಳೆದವು. VTU website ನಲ್ಲಿ ಇಂಜಿನಿಯರಿಂಗ್ ಪರೀಕ್ಷೆಗಳ ಫಲಿತಾಂಶ ಬಂದಿದೆ ಎಂದು ಅನಂತನ ಭಾವ ಅಕ್ಷಯ ಹೇಳಿದನು. ರತ್ನಾಕರನಿಗೆ ಫೇಸ್ಬುಕ್ ನಲ್ಲಿ ಸುಮ್ಮನೆ message ಮಾಡಿ "ತಮಾ result ಏನಾಯಿತು?" ಎಂದು ಅನಂತ ಕೇಳಿದನು. ಅದಕ್ಕೆ ರತ್ನಾಕರನು "ಅಣ್ಣ first class ಆಗಿದೆ" ಎಂದ. ಆದರೆ ಅನಂತನಿಗೆ ರತ್ನಾಕರನ ಮಾತಿನ ಮೇಲೆ ಭರವಸೆ ಇರಲಿಲ್ಲ. ಸ್ವತಃ ಇಂಜಿನಿಯರ್ ಆಗಿದ್ದ ಅನಂತನಿಗೆ VTU site ನಲ್ಲಿ ಯಾರದ್ದೋ result ಹುಡುಕುವುದು ದೊಡ್ಡ ವಿಷಯವಾಗಿರಲಿಲ್ಲ. ಅಂತೂ ರತ್ನಾಕರನ result ಹುಡುಕಿದ ಅನಂತ. ರತ್ನಾಕರ ಎರಡನೇ ಬಾರಿ washout ಆಗಿದ್ದ. ಅಂದರೆ ಎರಡು ವರ್ಷ ಸತತವಾಗಿ ಕಳೆದುಕೊಂಡಿದ್ದ. First year ನಲ್ಲಿ ಹಲವಾರು subject ಗಳು ಇನ್ನೂ back ಇದ್ದವು. ರತ್ನಾಕರನ ಪಕ್ಕದ ಮನೆಯ ಹತ್ತಿರ ಇರುವವರ ವಿಚಾರಿಸಿ ಕೇಳಿದರು ಅನಂತ ಹಾಗು ಅರವಿಂದ. ಆಗ ಒಬ್ಬ ಹಿರಿಯ ವ್ಯಕ್ತಿ ಹೇಳಿದರು "ರತ್ನಾಕರನ ತಂದೆ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಮಗ ಮಾತ್ರ ಹೀಗೆ ನೋಡಿ. ಸ್ವಲ್ಪವೂ ಅವನಿಗೆ ಜವಾಬ್ದಾರಿ ಎನ್ನುವುದಾಗಲಿ ಅಥವಾ ತನ್ನ ಮನೆಯವರು ಆರ್ಥಿಕವಾಗಿ ಗಟ್ಟಿಯಿಲ್ಲ. ಹಾಗಾಗಿ ತಾನು ಕಷ್ಟಪಟ್ಟು ಮುಂದೆ ಬರಬೇಕು ಎಂಬ ಛಲವೇ ಇಲ್ಲ. ಅವರ ಊರಿನ ಇನ್ನೊಬ್ಬ ಹುಡುಗ ಸುಧಾಕರ ಕೂಡ ಇವನ ಹಾಗೆ. ಓದುವುದಿಲ್ಲ. ಕೇವಲ ಫೇಸ್ಬುಕ್, Whatsapp ನಲ್ಲೇ ಮುಳುಗಿರುತ್ತಾನೆ. ಆದರೆ ಸುಧಾಕರನಿಗೆ ಜೀವನಕ್ಕೆ ತಂದೆ ಮಾಡಿಟ್ಟಿರುವ ಒಳ್ಳೆ ಜಮೀನು ಇದೆ. ಅವನು ಹೇಗಾದರೂ ಜೀವನ ಮಾಡಬಲ್ಲ. ಆದರೆ ರತ್ನಾಕರನಿಗೆ ಮನೆಯಲ್ಲಿ ಆಸ್ತಿ ಇಲ್ಲ. ಅವನ ಬುದ್ಧಿಶಕ್ತಿಯೇ ಅವನಿಗೆ ಆಸ್ತಿ. ಆದರೆ ಅವನು ಅದನ್ನೆಲ್ಲ ಬಿಟ್ಟು ಕೇವಲ ಶೋಕಿಲಾಲ ಆಗಿಬಿಟ್ಟಿದ್ದಾನೆ. ಏನು ಮಾಡುವುದು?" ಎಂದರು.
"ಆಯಿತು ಅಂಕಲ್. ನಾವಿನ್ನು ಬರುತ್ತೇವೆ" ಎಂದು ಅನಂತ ಹಾಗು ಅರವಿಂದ ಅಲ್ಲಿಂದ ಹೊರಟರು.
ಆಗ ಅನಂತನು "ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್, whatsapp ವಿದ್ಯಾವಂತರಿಗೆ ಬಹುಬೇಗನೆ ತಲುಪಬೇಕಾದ ಮಾಹಿತಿಗಳನ್ನು ನೀಡುತ್ತಿರುವುದು ವರದಾನವೇ ಸರಿ. ಎಷ್ಟೋ ಬಾರಿ ನಮಗೆ ತಿಳಿಯದೆ ಇದ್ದ ಮಾಹಿತಿಗಳು, ಬಹಳ ದಿನಗಳಿಂದ ಅನಿವಾರ್ಯ ಕಾರಣಗಳಿಂದ ದೂರವಿರುವ ಮಿತ್ರರನ್ನು ಸಂಪರ್ಕಿಸಿ ಅವರೊಂದಿಗೆ ಸಂವಹನ ನಡೆಸಲು ಈ ಎಲ್ಲ ಜಾಲತಾಣಗಳು ಸಹಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅತಿಯಾದರೆ ಅಮೃತವೂ ಕೂಡ ವಿಷ ಎಂಬಂತೆ ಈ ಸೋಶಿಯಲ್ ನೆಟ್ವರ್ಕ್ ಗಳ ಅತಿಯಾದ ಬಳಕೆ ಒಳ್ಳೆಯದಲ್ಲ" ಎಂದನು.
ಅದಕ್ಕೆ ಅರವಿಂದನು "ಹೌದು. ನನಗೂ ಹಾಗೆ ಅನಿಸುತ್ತೆ. ರತ್ನಾಕರನಿಗೆ ಇಂಜಿನಿಯರಿಂಗ್ ಕಷ್ಟವಾದರೆ ಬೇರೆ degree ಮಾಡಲಿ. ಕೇವಲ ಮಾರ್ಕ್ಸ್ ಮೇಲೆ ನಾವು ಯಾರೊಬ್ಬರನ್ನು ಅಳೆಯಲು ಸಾಧ್ಯವಿಲ್ಲ. ಆದರೆ ರತ್ನಾಕರನ ವಿಚಾರದಲ್ಲಿ ಅವನ attitude ಬದಲಾಗಬೇಕು. ಇಲ್ಲವಾದರೆ ಯಾವುದೇ degree ಮಾಡಿದರೂ ಅವನ ಕಥೆ ಅಷ್ಟೆ. ನಾವು ಕೇವಲ suggestion ಕೊಡಬಹುದು. ಆದರೆ ಅವನಿಗೆ ತಾನು ತಪ್ಪು ಮಾಡುತ್ತಿದ್ದೇನೆ ಎಂದು realise ಆಗಬೇಕು. ಅಲ್ಲಿಯ ತನಕ ಹೀಗೆ ಸುಳ್ಳು ಹೇಳುವುದು ಮುಂದುವರಿಸುತ್ತಾ ಇರುತ್ತಾನೆ ಅವನು" ಎಂದನು.
ಅನಂತನು "ನಿಜ ಅರವಿಂದಣ್ಣ. ಹಿಂದೆ ಕುಡಿತ, ಡ್ರಗ್ಸ್‌, ಸಿಗರೇಟ್, ಜೂಜು ಇತ್ಯಾದಿಗಳನ್ನು ಚಟ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಅಂತೆಯೇ ಮೊಬೈಲ್‌, ಫೇಸ್‌ಬುಕ್‌ ಅಥವಾ ಇಂಟರ್ನೆಟ್‌ನ ಇತರ ಸೌಕರ್ಯಗಳ ಅತಿಯಾದ ನಿರಂತರ ಬಳಕೆ ಆಧುನಿಕ ವ್ಯಸನಗಳಾಗಿವೆ. ಹಾಗಾಗಿ ಸಾಮಾಜಿಕ ಜಾಲತಾಣಗಳನ್ನು ಮಿತಿಯಲ್ಲಿ ಬಳಸಿದರೆ ಒಳಿತು. ಮುಖ್ಯವಾಗಿ ಯುವ ಜನಾಂಗದವರು ಎಚ್ಚೆತ್ತುಕೊಳ್ಳಬೇಕು" ಎಂದನು.



Wednesday, 27 August 2014

ರಕ್ತ ಸಂಬಂಧ

ಅಂದು ಶನಿವಾರ. ಆ ದಿನ ಶರತ್ ಗೆ ಸಂತಸದ ಕ್ಷಣ. ಹಲವಾರು ದಿನಗಳ ಪ್ರಯತ್ನದ ಬಳಿಕ ನೌಕರಿ ಸಿಕ್ಕಿತ್ತು. ಸೋಮವಾರದಿಂದ ಹೊಸ ಕಂಪೆನಿಯನ್ನು join ಆಗಬೇಕಿತ್ತು. ಆತ ತನಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಬ್ಯಾಗ್ ನಲ್ಲಿ ತುಂಬಿದ. ಆಗ ಕುಮಟಾದಿಂದ ಶರತನ ಚಿಕ್ಕಮ್ಮ ಕಲಾವತಿ ಬಂದಳು. "Job ಸಿಕ್ಕಿದ ಖುಷಿಯಲ್ಲಿ ನಮ್ಮನ್ನೆಲ್ಲಾ ಮರೆಯಬೇಡ ಶರತ" ಎಂದು ಹೇಳಿದಳು ಚಿಕ್ಕಮ್ಮ. "ನಿಮ್ಮನ್ನೆಲ್ಲಾ ಹೇಗೆ ಮರೆಯಲು ಸಾಧ್ಯ? ನಿಮ್ಮ ಮಾರ್ಗದರ್ಶನವು ನನಗೆ ಯಾವಾಗಲು ಅಗತ್ಯ" ಎಂದನು ಶರತ್.
ಶರತನು ಅಜ್ಜನ ಮನೆಗೆ ಹೋಗದೆ ತುಂಬಾ ದಿನಗಳು ಆಗಿದ್ದವು. ಒಮ್ಮೆ ಅಜ್ಜಿ, ಮಾವ, ಅತ್ತೆಯನ್ನು ಭೇಟಿಯಾಗಿ ಹೋಗಬಹುದಲ್ಲ ಎಂದೆನಿಸಿತು. ಚಿಕ್ಕಮ್ಮನ ಜೊತೆ ಶರತನು ಅಜ್ಜನ ಮನೆಗೆ ಹೊರಟ. ಶಿರಸಿಯಿಂದ ಸುಮಾರು ೧೫ ಕಿ.ಮಿ. ಆಗುತ್ತಿತ್ತು ಆ ಹಳ್ಳಿ. ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಮೇಲೆ ಹೊರಟನು ಅವನು ಚಿಕ್ಕಮ್ಮನ ಜೊತೆ. ಅಜ್ಜನ ಮನೆಗೆ ಬಂದು ಇಳಿದನು ಶರತ್. ಅಜ್ಜಿಗೆ ಮೊಮ್ಮಗನನ್ನು ನೋಡಿ ಆನಂದಭಾಷ್ಪ. "ಎಷ್ಟು ದಿನವಾಗಿತ್ತು ಮರಿ ನಿನ್ನನ್ನು ನೋಡದೆ. ಚೆನ್ನಾಗಿದ್ದೀಯ?" ಎಂದಳು ಅಜ್ಜಿ.
"ನಾನು ಚೆನ್ನಾಗಿ ಇದ್ದೇನೆ. ನನಗೆ ನೌಕರಿ ಸಿಕ್ಕಿದೆ ಅಜ್ಜಿ. ಇವತ್ತು ರಾತ್ರಿ VRL ಬಸ್ ನಲ್ಲಿ ಬೆಂಗಳೂರಿಗೆ ಪಯಣ" ಎಂದನು ಶರತ್.
"ಆಗಲಿ ಮಗ. ಒಳ್ಳೆ ನೌಕರಿ ಸಿಕ್ಕಿತಲ್ಲ. ಇನ್ನು ಒಳ್ಳೆ ಹೆಂಡತಿ ಕೂಡ ಸಿಗಲಿ" ಎಂದು ಶುಭ ಹಾರೈಸಿದಳು.
"ತಮಾ ಎಷ್ಟು ವರ್ಷವಾಗಿತ್ತು ನಿನ್ನನ್ನು ನೋಡದೆ. ಉನ್ನತ ವ್ಯಾಸಂಗಕ್ಕಾಗಿ ನೀನು ಶಿರಸಿ ಊರನ್ನು ಬಿಟ್ಟ ಬಳಿಕ ನಿನ್ನನ್ನು ನೋಡಿಯೇ ಇರಲಿಲ್ಲ. ಇವತ್ತು ನೋಡಿ ಸಂತೋಷವಾಯಿತು" ಎಂದಳು ಶರತನ ಅತ್ತೆ ಮೇಧಾ.
"ಇಂದು ಮುಹೂರ್ತ ಕೂಡಿ ಬಂದಿದೆ ನೋಡಿ ಅತ್ತೆ" ಎಂದು ಶರತ್ ನಗುತ್ತಾ ಹೇಳಿದನು.
ಒಳಗೆ ಹೋಗಿ ಚಹಾ ಕುಡಿದು ಹಲಸಿನಕಾಯಿ ಸಂಡಿಗೆ ತಿನ್ನುತ್ತ ತಾನು ಇಲ್ಲಿ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡನು ಶರತ್. ಆತನ ಕಣ್ಣಲ್ಲಿ ನೀರು ತುಂಬಿತ್ತು.
ಆಗ "ನನಗಿಂತಲೂ ಎತ್ತರವಾಗಿಬಿಟ್ಟಿದ್ದೀಯಲ್ಲ ಶರತ್. ನೆನಪಿದೆಯಾ? ನೀನು ಚಿಕ್ಕವನಾಗಿದ್ದಾಗ ಇದೇ ಜಾಗದಲ್ಲಿ ಕ್ರಿಕೆಟ್ ಬ್ಯಾಟ್, ಬಾಲ್, ಸ್ಟಂಪ್ ಎಲ್ಲಾ ಇಡುತಿದ್ದೆ" ಎಂದು ಕೊಟ್ಟಿಗೆಯ ಹಿಂಭಾಗದಲ್ಲಿ ಇರುವ ಒಂದು ಚೀಲವನ್ನು ತೋರಿಸುತ್ತ ಹೇಳಿದನು ಶರತನ ಮಾವ ರಘುರಾಮ.
"ನೆನಪಿದೆ ಮಾವ. ಅವೆಲ್ಲಾ golden moments" ಎಂದನು ಶರತ್.
ಆಗ ಮಾವನ ಹಿರಿಯ ಮಗಳು ಶಿಲ್ಪಾ ಬಂದಳು. ಇವರೆಲ್ಲಾ ತಮ್ಮ ಮನೆಗೆ ಯಾಕಾದರೂ ಬಂದಿದ್ದಾರೋ ಎಂಬ ಮುಖ ಮಾಡುತ್ತಾ ಮನಸ್ಸಿಲ್ಲದ ಮನಸ್ಸಿನಿಂದ "ಶರತ್ ಭಾವ, ಕಲತ್ತೆ" ಎಂದು formality ಗೋಸ್ಕರ ಮಾತನಾಡಿಸಿ ತಾನು ಮೊಬೈಲ್ ನಲ್ಲಿ ಯಾರೊಟ್ಟಿಗೋ ಮಾತನಾಡುತ್ತ busy ಆದಳು.
ಶಿಲ್ಪಾಳಿಗೆ ಇಬ್ಬರು ತಂಗಿಯರು. ಸುರಕ್ಷಾ ಮತ್ತು ಸಮೀಕ್ಷಾ (ಅವಳಿ ಸಹೋದರಿಯರು). ಅವರಿಬ್ಬರೂ ಈಗ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರು ಕೂಡ ಇವನು ಯಾಕಾದರೂ ಬಂದ ಎನ್ನುವ ಮುಖ ಮಾಡುತ್ತ formality ಗೋಸ್ಕರ "ಶರತಣ್ಣ" ಎಂದು ಮಾತನಾಡಿಸಿ ನಾಪತ್ತೆ ಆದರು. ಅವನಿಗೆ ವಿಚಿತ್ರವೆನಿಸಿತು. "ಸುರಕ್ಷಾ ಸಮೀಕ್ಷಾ ಇಬ್ಬರನ್ನೂ ಎತ್ತಿ ಆಡಿಸಿದವನು ನಾನು. ಇವರೂ ಕೂಡ ಹಿರಿಯಕ್ಕನ ಹಾಗೆ ಆಗಿಬಿಟ್ಟರಾ?" ಎನಿಸಿತು.
"ಶಿಲ್ಪಾಳಿಗೆ ಮೊದಲಿನಿಂದಲೂ ದೊಡ್ಡಸ್ತಿಕೆ ಸೊಕ್ಕು. ಆದರೆ ಅವಳಿ ಸಹೋದರಿಯರು ಹೀಗೆ ಇರಲಿಲ್ಲ. ಅವರು ಕೂಡ ಬದಲಾಗಿಬಿಟ್ಟರಾ? ಶಾಲೆಗೆ ಅವರಿಬ್ಬರ admission ಮಾಡಿಸುವಾಗ ತಾನು ಹಾಗೂ ತನ್ನ ತಾಯಿ ಮುಂದಾಳತ್ವ ವಹಿಸಿದ್ದು ಇವರಿಗೆ ನೆನಪಿಲ್ಲವೇ? ಸದಾ ತನ್ನ ಸ್ವಂತ ತಂಗಿಯರ ಹಾಗೆ ನೋಡಿಕೊಂಡಿದ್ದೆ. ಆದರೆ ಈಗ ಅದಕ್ಕೆ ಬೆಲೆ ಇಲ್ಲವೇ? ರಕ್ತ ಸಂಬಂಧ ಎನ್ನುವುದು ಇಷ್ಟೇನಾ?" ಎಂದುಕೊಂಡು ಒಮ್ಮೆ ಮನಸ್ಸಿಗೆ ನೋವಾಯಿತು.
ಆದರೆ ಮರುಕ್ಷಣ ಶರತ್ ಗೆ ಅಲ್ಲಿ ಗೋಡೆಯ ಮೇಲೆ ತನ್ನ ಸ್ವರ್ಗವಾಸಿ ಅಜ್ಜನ ಫೋಟೋ ಕಾಣಿಸಿತು.ಅಜ್ಜನ ಫೋಟೋಕ್ಕೆ ನಮಸ್ಕಾರ ಮಾಡಿ "ಪರಿವರ್ತನೆ ಜಗದ ನಿಯಮ. ನಾವು ಒಳ್ಳೆಯದನ್ನು ಮಾಡಿದ್ದರೆ ಒಂದಲ್ಲಾ ಒಂದು ದಿನ ನಮಗೂ ಒಳ್ಳೆಯದೇ ಆಗುತ್ತದೆ. भगवान के घर मे  देर है, अंधेर नही.  ನನಗೆ ಒಳ್ಳೆ ಉದ್ಯೋಗ ಸಿಕ್ಕಿದೆ. ನಿಮ್ಮ ಆಶೀರ್ವಾದ ಸದಾ ಇರಲಿ" ಎಂದು ಮನಸ್ಸಿನಲ್ಲೇ ಹೇಳಿಕೊಂಡ. 
ಅಜ್ಜಿ, ಮಾವ, ಅತ್ತೆಗೆ ನಮಸ್ಕಾರ ಮಾಡಿ "ಬರುತ್ತೇನೆ" ಎಂದ ಶರತ್ ಚಿಕ್ಕಮ್ಮನ ಜೊತೆ ವಾಪಸ್ ಶಿರಸಿಗೆ ಹೋದ. ರಕ್ತ ಸಂಬಂಧ ಎನ್ನುವುದಕ್ಕಿಂತ ಭಾವನಾತ್ಮಕ ಸಂಬಂಧ ಶ್ರೇಷ್ಠವಾದುದು ಎಂದುಕೊಂಡು ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು VRL ಬಸ್ ಏರಿ ಕುಳಿತ.






Tuesday, 26 August 2014

"ಒಂಥರಾ ವಿಚಿತ್ರ ಅನುಭವ"

                        

ಆಗಸ್ಟ್ ೭ ರ ಸಂಜೆ ನನ್ನ ರೂಮ್ ಹತ್ತಿರ ಒಬ್ಬ ವ್ಯಕ್ತಿ ಬಂದಿದ್ದ. ಸುಮಾರು ೪೦-೪೫ ರ ಪ್ರಾಯದವನು.
ಅವನು "ನಮಸ್ಕಾರ ಸರ್. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಹತ್ತಿರ ಯಾವ್ದೋ PG ಒಂದರಲ್ಲಿ ಸಂದೀಪ ಎಂಬ ಹುಡುಗ ಇದ್ದಾನೆ. ಅವನನ್ನು ಹುಡುಕುತ್ತ ಬಂದಿದ್ದೆ. ನಿಮಗೇನಾದರೂ ಅವನ ಪರಿಚಯ ಉಂಟಾ?" ಎಂದು ನನ್ನನ್ನು ಕೇಳಿದ.

"ನನಗೆ ಗೊತ್ತಿಲ್ಲ ಸ್ವಾಮಿ. ಇಲ್ಲಿ ಹಲವಾರು PG ಗಳು ಇವೆ" ಎಂದು ನಾನು ಹೇಳಿದೆ.
ಆಗ ಅವನು "ನಾನು ಕುಂದಾಪುರದ ಹತ್ತಿರದ ಸಾಲಿಗ್ರಾಮದವನು. ಸಂದೀಪ ಇಲ್ಲೇ ಇದ್ದಾನೆ ಅಂತ ಹೇಳಿದ್ದ. ನಾನು ಆ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಕಡೆ ಇರುವ ೨-೩ PG ಗಳಲ್ಲಿ ವಿಚಾರಿಸಿದೆ. ಆದರೆ ಅಲ್ಲಿ ಆತ ಸಿಗಲಿಲ್ಲಿ. ಅಲ್ಲಿ ಕನ್ನಡ ಮಾತನಾಡುವವರು ಕಡಿಮೆ. ನೀವು ಸಿಕ್ಕಿದ್ದು ತುಂಬಾ ಸಂತೋಷವಾಯಿತು ಸರ್. ನಿಮ್ಮ ಊರು ಯಾವುದು?" ಅಂತ ಕೇಳಿದ.
 

ಆಗ ನಾನು "ನನ್ನ ಊರು ಯಾವುದಾದರೆ ನಿಮಗೇನು? ನಿಮ್ಮ ಹೆಸರು ಗಣೇಶ ಅಂತ ನನಗೆ ಗೊತ್ತು" ಎಂದೆ.
ಅದಕ್ಕೆ ಅವನು "ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯಿತು ಮಾರಾಯ್ರೇ?" ಎಂದ.
ಇದರ ನಂತರ ನಾನು ಅವನಿಗೆ ಹೇಳಿದ್ದು ಕೇಳಿ ಅವನು ಅಲ್ಲಿಂದ ಪರಾರಿಯಾದ.

೩-೪ ವರ್ಷಗಳ ಹಿಂದೆ ನಾನು ಧಾರವಾಡದ ಗಾಂಧೀನಗರದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಬಂದಿದ್ದ. ಅವನು "ಇಲ್ಲಿ ಸಂದೀಪ ಇದ್ದಾನಾ? ನಾನು ಅವನನ್ನು ಹುಡುಕುತ್ತ ಬಂದಿದ್ದೆ. ಇಲ್ಲೇ ಹತ್ತಿರದಲ್ಲಿ ಇರುವ ಈಶ್ವರ ದೇವಸ್ಥಾನದ ಹತ್ತಿರ ಅವನು ಇರುತ್ತೇನೆ ಎಂದು ಹೇಳಿದ್ದ. ನಿಮಗೆ ಗೊತ್ತುಂಟಾ? ನಾನು ಕುಂದಾಪುರದ ಹತ್ತಿರದ ಸಾಲಿಗ್ರಾಮದವನು.ನನ್ನ ಹೆಸರು ಗಣೇಶ. ವಾಪಸ್ ಹೋಗಲು ನನ್ನ ಬಳಿ ಹಣ ಇಲ್ಲ. ಸ್ವಲ್ಪ ಸಹಾಯ ಮಾಡುತ್ತೀರಾ?" ಎಂದಿದ್ದ.
ನಾನು ಹಾಗೂ ನನ್ನ ಗೆಳೆಯ ಅವನನ್ನು ಬೈದು ಓಡಿಸಿದ್ದೆವು.

ನಿನ್ನೆ ಸಿಕ್ಕಿದವನು ಅದೇ ವ್ಯಕ್ತಿ !!!!!!!!!
ನನಗೆ ಅವನ ಮುಖ ನೆನಪು ಇರಲಿಲ್ಲ. ಆದರೆ ಸಂದೀಪ, ಕುಂದಾಪುರದ ಸಾಲಿಗ್ರಾಮ ಎಂದ ತಕ್ಷಣ ನೆನಪಿಗೆ ಬಂತು ಇವನೇ ಆ ವ್ಯಕ್ತಿ ಎಂದು.

ಗೆಳೆಯರೆಲ್ಲಾ ಸಿಕ್ಕಾಪಟ್ಟೆ ನಕ್ಕಿದರು. ಅಂತು ಆ fraud ಗಣೇಶ ನಿನ್ನನ್ನು ಹುಡುಕಿಕೊಂಡು ಬೆಂಗಳೂರಿಗೂ ಬಂದ ಎಂದು.
ಹ್ಹ ಹ್ಹ ಹ್ಹ....