Friday, 19 September 2014

ಧ್ರುವತಾರೆ

ಸುಮಾರು ೭ ತಿಂಗಳುಗಳ ಬಳಿಕ ನನ್ನ ಆತ್ಮೀಯರಾದ ರಮೇಶಣ್ಣ (ರಮೇಶ್ ಹೆಗಡೆ) ಅವರನ್ನು ಭೇಟಿಯಾದೆ. ಕಳೆದ ವರ್ಷ ನನಗೆ ಅವರು ಬರೆದ "ನೋವಿನಲಿ ನವಿಲು ಗರಿ" (ಕನ್ನಡ ಗಝಲ್ ಗಳು) ಎಂಬ ಪುಸ್ತಕವನ್ನು ಕೊಟ್ಟಿದ್ದರು. ಈ ಬಾರಿ ಅವರ ಇನ್ನೊಂದು ಕವನಗುಚ್ಛ "ಮನದಲ್ಲಿ ಮನೆಯ ಮಾಡಿ..." ಯನ್ನು ಕೊಟ್ಟಿದ್ದಾರೆ. ಅದನ್ನು ಓದಿ ಮುಗಿಸಿದೆ. ಅದರಲ್ಲಿ ಅವರು ನಮ್ಮೆಲ್ಲರ ಹೆಮ್ಮೆಯ ಧ್ರುವತಾರೆ ದಿ|| ಕಲ್ಪನಾ ಚಾವ್ಲಾರ ಬಗ್ಗೆ ಒಂದು ಕವನ ಬರೆದಿದ್ದಾರೆ. ನನಗೆ ತುಂಬಾ ಇಷ್ಟವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಚುಕ್ಕಿ - ಚಂದ್ರರ ಕಡೆಯೇ
ಹೊಳೆವ
ಕಣ್ಣ ನೆಟ್ಟವಳು ;
ಮೊದಲ ಹೆಜ್ಜೆ ಇಟ್ಟವಳು ಇವಳು ...
ಹಕ್ಕಿ - ಪಕ್ಕಿಯ ತೆರದಿ ...
ತಾ - ಹಾರಬೇಕೆಂಬ
ಕನಸನುಟ್ಟವಳು !

ಕನಸುಗಳೇ ಗರಿಗೆದರಿ...
ಎಲ್ಲ ಪರಿಧಿಯ ಮೀರಿ,
ಮೇಲೇರಿ ಹಾರಿದವಳು, ಇವಳು
ತಾಯ್ನೆಲದ ಘನತೆಯನು
ಮುಗಿಲೆತ್ತರ ಸಾರಿದವಳು !
ಓ ಧೀರ ವನಿತೆ...
ಅನಂತದ ಗಗನವೇ
ಅಂತ್ಯ ಹಾಡಿತೆ - ನಿನಗೆ,
-ಮಸಣವಾಯಿತೆ ಕೊನೆಗೆ ?
ಶೋಕಸಾಗರವು
ನಿನ್ನ ತವರುಮನೆಗೆ !
ನಿನ್ನಗಲಿಕೆಯ
ನೋವು - ನೆನಪಾಗಿ
ಕಾಡದಿರದು - ನಮಗೆ !
ಆದರೂ,
ಒಂದು ರೀತಿಯ ಹೆಮ್ಮೆ
ನಿನ್ನ ಸಾವು ;
ನೆಲದಲ್ಲೇ
ತೊದಲು ನುಡಿದೆ,
ಬಾನಲ್ಲಿ ಕೊನೆಗೆ ಮಡಿದೆ !!
ಇನ್ನೇನು ಬೇಕು ಮತ್ತೆ ?
ಹಂಸಗೀತೆಯಲ್ಲೂ
ನೀ - ವೀರ ಗಾಥೆ !!

No comments:

Post a Comment